ಸಂಪಾದಕೀಯ | ಕಠಿಣ ಕ್ರಮ ಅಗತ್ಯ

ವಿಜಯವಾಣಿ (8)
Published on

ರಾಜಧಾನಿ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಕಚೇರಿ ತೆರೆದು, ಇಲ್ಲಿಂದಲೇ ಅಮೆರಿಕ, ಕೆನಡಾ ದೇಶದ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಮಂಗಳವಾರ ಬಲೆಗೆ ಕೆಡವಿದ್ದಾರೆ. ಬೇರೆ ಬೇರೆ ರಾಜ್ಯಗಳ ಒಟ್ಟು 16 ದುರುಳರನ್ನು ಬಂಧಿಸಲಾಗಿದ್ದು, 41 ಕಂಪ್ಯೂಟರ್ ಸೇರಿದಂತೆ ಕಾಲ್ ಸೆಂಟರ್​ನಲ್ಲಿದ್ದ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದೊಂದು ಮಹತ್ವದ ಕಾರ್ಯಾಚರಣೆಯೇ ಸರಿ. ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಇದುವರೆಗೆ ಬಿಹಾರ, ಉತ್ತರ ಪ್ರದೇಶದ ಅಥವಾ ಬೇರೆ ದೇಶಗಳಲ್ಲಿ ಇರುವ ಜಾಲಗಳ ಹೆಸರು ಕೇಳಿ ಬರುತ್ತಿತ್ತು. ಈಗ ನಮ್ಮಲ್ಲೇ ಇಂಥ ಕೃತ್ಯ ನಡೆಯುತ್ತಿರುವುದು ಆತಂಕಕಾರಿ. ಪೊಲೀಸರು ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಅವಶ್ಯಕತೆ ಇದೆ. ಬೇರೆ ಕಡೆಗಳಲ್ಲೂ ಈ ನಿಟ್ಟಿನಲ್ಲಿ ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಬೇಕಿದೆ. ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್​ಗೆ ಹತ್ತು ಹಲವು ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಜನರು ಹಣ-ನೆಮ್ಮದಿ ಕಳೆದುಕೊಳ್ಳುತ್ತಲೇ ಇದ್ದಾರೆ. ವಂಚಕರು ಅಮಾಯಕರನ್ನು ಬಲೆಗೆ ಕೆಡವಲು ಪೊಲೀಸ್, ಆಂಟಿ-ನಾಕೋಟಿಕ್ ಅಥವಾ ಕಸ್ಟಮ್ಸ್ ಅಧಿಕಾರಿಗಳಂಥ ಕಾನೂನು ಜಾರಿ ಅಧಿಕಾರಿಗಳನ್ನು ಅನುಕರಿಸುತ್ತಾರೆ.

ಅಮಾಯಕರು ಯೋಚಿಸಲು ಅವಕಾಶ ನೀಡದಂತೆ, ಹಣವನ್ನು ತ್ವರಿತವಾಗಿ ಹಸ್ತಾಂತರಿಸುವಂತೆ ಒತ್ತಡ ಹೇರುತ್ತಾರೆ. ಈ ಬಗ್ಗೆ ಪೊಲೀಸ್ ಇಲಾಖೆ ತುರ್ತು ಗಮನ ಹರಿಸಬೇಕಾಗಿದೆ. ದುರುಳರ ಬಂಧನಕ್ಕೆ ಬಲೆ ಬೀಸುವುದು ಮಾತ್ರವಲ್ಲದೆ, ಮತ್ತಷ್ಟು ಅಮಾಯಕರು ಇದಕ್ಕೆ ಬಲಿಯಾಗದಂತೆ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಅವಶ್ಯಕ ಕ್ರಮ ಕೈಗೊಳ್ಳಬೇಕಾಗಿದೆ. ಅಪರಿಚಿತರಿಂದ, ವಂಚಕರಿಂದ ಇಂಥ ಬೆದರಿಕೆ ಕರೆಗಳು ಬಂದಾಗ ಜನರು ಕೂಡ ಆತಂಕಕ್ಕೆ ಒಳಗಾಗದೆ, ಮಾಹಿತಿಯನ್ನು ಪರಾಮಶಿಸಬೇಕು. ಬಲವಂತವಾಗಿ ಅಥವಾ ಒತ್ತಡದಲ್ಲಿ ಹಣವನ್ನು ವರ್ಗಾಯಿಸಬಾರದು. ಅಪರಾಧ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಯಾವುದೇ ಕಾನೂನು ಜಾರಿ ಅಧಿಕಾರಿ ಹಣವನ್ನು ವರ್ಗಾಯಿಸಲು ಅಥವಾ ಠೇವಣಿ ಮಾಡಲು ಕೇಳುವುದಿಲ್ಲ ಎಂಬ ಸಾಮಾನ್ಯ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು.

ಬ್ಯಾಂಕ್​ಗಳು ಮೊಬೈಲ್ ಫೋನ್​ಗಳ ಮೂಲಕ ಕೆವೈಸಿ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ. ಯಾವುದೇ ಡಿಜಿಟಲ್ ವಂಚನೆಯಾದಾಗ ಸೈಬರ್ ಕ್ರೖೆಮ್ ವಿಭಾಗದ ಸಹಾಯವಾಣಿ (1930) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರ ವಹಿಸಬೇಕು. ಈ ಹೊಸ ಮತ್ತು ಘಾತಕ ಸವಾಲಿನ ವಿರುದ್ಧ ಹೋರಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದು. ಹಾಗಾಗಿ, ಡಿಜಿಟಲ್ ಬಂಧನದ ಪ್ರಕರಣಗಳನ್ನು ಹಾಗೂ ಈ ಬಗೆಯ ಯಾವುದೇ ಬೆದರಿಕೆಗಳನ್ನು ಎದುರಿಸಲು ರಾಷ್ಟ್ರವ್ಯಾಪಿ ಪೊಲೀಸ್ ವ್ಯವಸ್ಥೆ ಸಜ್ಜುಗೊಳ್ಳಬೇಕಿದೆ. ಅಪರಾಧಿಗಳು ಬಳಸುವ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಜನರು ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net