ಮಾರ್ಗಸೂಚಿ ಅನುಸರಿಸದಿದ್ದರೆ ಕಟ್ಟುನಿಟ್ಟಿನ ಕ್ರಮ

HUN-JUNE-9-1(HOTEL UNION MEETING)
Published on

ಹುಣಸೂರು: ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಹಸೀಲ್ದಾರ್ ಐ.ಇ.ಬಸವರಾಜ ಹೋಟೆಲ್ ಮಾಲೀಕರಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, 75 ದಿನಗಳ ನಂತರ ಹೋಟೆಲ್ ಉದ್ಯಮ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಹೋಟೆಲ್‌ನ ಪ್ರಮುಖ ದ್ವಾರದಲ್ಲಿ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಜತೆಗೆ ಸ್ಯಾನಿಟೈಸರ್ ಹಾಕುವುದು ಕಡ್ಡಾಯ ಎಂದರು.

ಪ್ರತಿ ಟೇಬಲ್‌ನಲ್ಲಿ ಇಬ್ಬರು ಗ್ರಾಹಕರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಇಬ್ಬರಿಗಿಂತ ಹೆಚ್ಚಿನ ಗ್ರಾಹಕರು ಕುಳಿತುಕೊಳ್ಳುವು ದಾದರೆ ಪಾರದರ್ಶಕ ಪ್ಲಾಸ್ಟಿಕ್ ಪರದೆಗಳನ್ನು ನಿರ್ಮಿಸುವುದು ಅಗತ್ಯ. ಅಲ್ಲದೆ 10 ವರ್ಷದೊಳಗಿನ ಮತ್ತು 65ವರ್ಷ ಮೇಲ್ಪಟ್ಟವರಿಗೆ ಸೇವೆ ನೀಡಬಾರದು ಎಂದು ಸೂಚಿಸಿದರು.

ಸ್ಟೀಲ್ ತಟ್ಟೆ ಮತ್ತು ಲೋಟಗಳ ಬಳಸಬಾರದು. ಬದಲಾಗಿ ಅಡಕೆ ಹಾಳೆ ಅಥವಾ ಪೇಪರ್ ಪ್ಲೇಟ್ ಮತ್ತು ಲೋಟಗಳನ್ನು ಬಳಸುವುದು ಅಗತ್ಯ. ಅಲ್ಲದೆ ರಾತ್ರಿ ಹೋಟೆಲ್ ಅನ್ನು ಶುಚಿಗೊಳಿಸುವುದು ಕಡ್ಡಾಯ. ಕಾರ್ಮಿಕರು ಮಾಸ್ಕ್, ಗ್ಲೌಸ್‌ಗಳು ಮತ್ತು ಫೇಸ್‌ಶೀಲ್ಡ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದರು.

ಗ್ರಾಹಕರ ಮಾಹಿತಿ ಪಡೆಯಿರಿ: ಹೋಟೆಲ್‌ಗಳಿಗೆ ಬರುವ ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆಯನ್ನು ಪಡೆಯಬೇಕು. ಮಾಂಸಹಾರಿ ಹೋಟೆಲ್‌ಗಳಲ್ಲಿ ಸೇವಿಸಿ ಬಿಟ್ಟ ಆಹಾರದ ತ್ಯಾಜ್ಯಗಳನ್ನು ಉಪಾಹಾರ ಸೇವಿಸಿದ ಗ್ರಾಹಕರೇ ತ್ಯಾಜ್ಯದ ಬಕೆಟ್‌ಗೆ ಹಾಕುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಮಾರ್ಗಸೂಚಿ ಅನುಸರಿಸದ ಹೋಟೆಲ್‌ಗಳನ್ನು ಬಂದ್ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ಪಟ್ಟಣ ಠಾಣೆ ಪಿಎಸ್‌ಐ ಮಹೇಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಬುದ್ಧ, ಉಪಾಧ್ಯಕ್ಷ ಮಂಜುನಾಥ್, ಅಡುಗೆ ಸುಬ್ಬಣ್ಣ, ಸದಸ್ಯರಾದ ಅಪ್ಪಿ, ಶಿವರಾಂ, ರಾಘವೇಂದ್ರ, ಗೋಪಿ, ಶ್ರೀಕಂಠಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net