

ಬೆಂಗಳೂರು: ಕರೊನಾ ಜಾಸ್ತಿಯಾದ ಬೆನ್ನಲ್ಲೇ ಕೆಲವರು ಹಣ ಮಾಡುವುದಕ್ಕೂ ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಡೆತ್ ಸರ್ಟಿಫಿಕೇಟ್, ಡಾಕ್ಟರ್ ಸರ್ಟಿಫಿಕೇಟ್ ಹೀಗೆ ನಾನಾ ರೀತಿಯ ಸರ್ಟಿಫಿಕೇಟ್ಗಳು ಹಾಗೂ ಆ್ಯಂಬುಲೆನ್ಸ್ಗೆ ಹಣ ವಸೂಲಿ ಮಾಡಲಾಗುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಲು, ಹೆಣ ಸಾಗಿಸಲು ಹಣ ಕೇಳಲಾಗುತ್ತಿದೆ. ಆಂಬುಲೆನ್ಸ್ ಚಾಲಕರು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಜತೆ ಕೆಲವು ವೈದ್ಯರೂ ಇಂತಹ ಕೆಲಸದಲ್ಲಿ ಶಾಮೀಲಾಗಿದ್ದಾರೆ. ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಕೆಲವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಇಂಥ ವಿಚಾರಗಳನ್ನು ಕಂಡು ಸುಮ್ಮನೆ ಕುಳಿತುಕೊಳ್ಳಬಾರದು. ಸರ್ಕಾರದ ಗಮನಕ್ಕೆ ತರಬೇಕು. ದಂಧೆಕೋರರು, ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಸಚಿವರು ಹೇಳಿದ್ದಾರೆ.