ನಕಲಿ ರಸಗೊಬ್ಬರ ವಿರುದ್ಧ ಕಠಿಣ ಕ್ರಮ; ರಾಜ್ಯ ಸರ್ಕಾರಗಳಿಗೆ ಕೇಂದ್ರ ಕೃಷಿ ಸಚಿವ ಚೌಹಾಣ್ ಸೂಚನೆ

shivaraj singh chowhan
Published on

ನವದೆಹಲಿ: ನಕಲಿ ಮತ್ತು ಕಳಪೆ ಗುಣಮಟ್ಟದ ರಸಗೊಬ್ಬರಗಳ ಮಾರಾಟದ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ಸೂಚನೆ ನೀಡಿದ್ದಾರೆ. ಈ ಕುರಿತು ಅವರು ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ರಸಗೊಬ್ಬರ ಉತ್ಪಾದನೆ ಮತ್ತು ಮಾರಾಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ನಕಲಿ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಬೇಕು. ನ್ಯಾನೋ ರಸಗೊಬ್ಬರಗಳು ಅಥವಾ ಜೈವಿಕ ಉತ್ತೇಜಕ ಉತ್ಪನ್ನಗಳನ್ನು ಸಾಂಪ್ರದಾಯಿಕ ರಸಗೊಬ್ಬರಗಳ ಜೊತೆಗೆ ಬಲವಂತವಾಗಿ ಟ್ಯಾಗ್ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ತಪ್ಪಿತಸ್ಥ ಕಂಪನಿಗಳು ಮತ್ತು ಮಾರಾಟಗಾರರ ವಿರುದ್ಧ ಕೂಡಲೇ ಎಫ್​ಐಆರ್​ಗಳ ದಾಖಲಿಸಿ ಪರವಾನಗಿ ರದ್ದತಿ ಮತ್ತಿತರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅವರಿಗೆ ಶಿಕ್ಷೆ ಆಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ. ಸ್ಥಳೀಯ ರೈತರ ಗುಂಪುಗಳನ್ನು ರಚಿಸಿ ಒರಿಜಿನಲ್ ಮತ್ತು ನಕಲಿ ಉತ್ಪನ್ನಗಳನ್ನು ಗುರುತಿಸುವ ಬಗ್ಗೆ ಶಿಕ್ಷಣ ನೀಡಬೇಕು. ನಕಲಿ ಉತ್ಪನ್ನಗಳು ಗಮನಕ್ಕೆ ಬಂದೊಡನೆ ರೈತರು ಸರ್ಕಾರಕ್ಕೆ ಮಾಹಿತಿ ನೀಡುವಂತಹ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ರಾಜ್ಯವ್ಯಾಪಿ ಅಭಿಯಾನ ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ. ರೈತರಿಗೆ ಸರಿಯಾದ ಸಮಯಕ್ಕೆ, ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ರಸಗೊಬ್ಬರ ಒದಗಿಸುವ ಅವಶ್ಯಕತೆ ಇದೆ. ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರಗಳ ಮಾರಾಟವನ್ನು 1985ರ ರಸಗೊಬ್ಬರ (ನಿಯಂತ್ರಣ) ಆದೇಶದಡಿ ನಿಷೇಧಿಸಲಾಗಿದೆ. ಇದು 1955ರ ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ ಬರುತ್ತದೆ ಎಂದು ಚೌಹಾಣ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net