

ಉತ್ತರಪ್ರದೇಶ: ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಬೀದಿನಾಯಿಯೊಂದು ಹಾಸಿಗೆ ಮೇಲೆ ಮಲಗಿದ್ದ ರೋಗಿಯೊಬ್ಬರ ಪಕ್ಕದಲ್ಲಿ ಇರಿಸಲಾಗಿದ್ದ ಆಹಾರ ಮತ್ತು ನೀರನ್ನು ಕೊಠಡಿಯೊಳಗೆ ಬಂದು ಸೇವಿಸಿದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಆಸ್ಪತ್ರೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವೀಡಿಯೊದಲ್ಲಿ ಬೀದಿನಾಯಿಯು ರೋಗಿ ಮಲಗಿದ್ದ ಹಾಸಿಗೆಯ ಪಕ್ಕ ಇರಿಸಲಾಗಿದ್ದ ಊಟ ಮತ್ತು ನೀರನ್ನು ಸೇವಿಸುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೆಲವರು ಸ್ಥಳೀಯ ಅಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ. ಮೊರಾದಾಬಾದ್‌ನ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (CMO) ಕುಲದೀಪ್ ಸಿಂಗ್ ಅವರು ತ್ವರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಸಾರ್ವಜನಿಕರ ಆಸ್ಪತ್ರೆಗಳ ಆವರಣದಲ್ಲಿ ಮತ್ತು ಒಳಾಂಗಣ ಪ್ರದೇಶಗಳಲ್ಲಿ ಪ್ರಾಣಿಗಳ ಪ್ರವೇಶ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಕುರಿತು ಸೂಕ್ತ ಕ್ರಮವನ್ನು ಜಾರಿಗೆ ತರಲು ಅಧಿಕಾರಿಗಳು ಮುಂಚೂಣಿಯಲ್ಲಿದ್ದಾರೆ. "ನಾನು ವೀಡಿಯೋ ಗಮನಿಸಿದ್ದೇನೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಿಗೆ (CMS) ಆದೇಶಿಸಿದ್ದೇನೆ. ಅಲ್ಲದೆ, ಯಾವುದೇ ಪ್ರಾಣಿ ಆಸ್ಪತ್ರೆಗೆ ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಲು ನಾನು ಸಿಎಂಸ್ಗೆ ಕೇಳಿದ್ದೇನೆ" ಎಂದು ಸಿಂಗ್ ಹೇಳಿದ್ದಾರೆ.
ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್ ಮಾತನಾಡಿ, "ವಿಡಿಯೋದ ಸತ್ಯಾಸತ್ಯತೆ ಮತ್ತು ಅದರ ಮೂಲವನ್ನು ಪರಿಶೀಲಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಮುಂದೆ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಸಿಬ್ಬಂದಿಗೆ ಜಾಗೃತಿ ಮೂಡಿಸಲಾಗುವುದು" ಎಂದರು,(ಏಜೆನ್ಸೀಸ್).