

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಗ್ರಾಮೀಣ ಜನರಿಗೆ ಉದ್ಯೋಗ ಅವಕಾಶ ನೀಡುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಗುರಿ ಪೂರ್ಣಗೊಳಿಸುವ ಸಲುವಾಗಿ ಐದಂಶಗಳ ಸೂತ್ರ ಪ್ರಯೋಗಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 16 ಕೋಟಿ ಮಾನವ ದಿನ ಸೃಷ್ಟಿಸಿರುವ ನರೇಗಾದಲ್ಲಿ ಹೊಸ ಕಾರ್ಯಕ್ರಮ ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಉದ್ಯೋಗ ನೀಡಿಕೆ ಜತೆಯಲ್ಲೇ ಆಸ್ತಿ ಸೃಜನೆಯ ಕಡೆಗೂ ಆದ್ಯತೆ ನೀಡಲು ಸರ್ಕಾರ ಗಮನ ಹರಿಸಿದೆ. ರಸ್ತೆಯಂತಹ ಕಾಮಗಾರಿಗಷ್ಟೇ ಸೀಮಿತವಾಗಿದ್ದ ನರೇಗಾ ಯೋಜನೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಹೆಚ್ಚಿಸುವ ಕೃಷಿಹೊಂಡ, ಬದುಗಳ ನಿರ್ವಣ, ಕಲ್ಯಾಣಿ, ಕೆರೆಗಳ ಪುನಶ್ಚೇತನ, ತೆರೆದ ಬಾವಿ ಅಭಿವೃದ್ಧಿಯಂತಹ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೊಸ ಕಾಮಗಾರಿ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ನರೇಗಾದ ಕಾರ್ವಿುಕ ಆಯವ್ಯಯ ತಯಾರಿ ಸಂದರ್ಭದಲ್ಲೇ ಹೊಸ ಪ್ರಯೋಗ ಮಾಡಲು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿ ಅಂತಿಮ ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಎಲ್ಲ ಯೋಜನೆಗಳು ಇಡೀ ರಾಜ್ಯದಲ್ಲಿ ಏಕರೂಪ ಮಾದರಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಎಷ್ಟು ಮಾನವ ದಿನ: ಕೇಂದ್ರ ರಾಜ್ಯಕ್ಕೆ ಮೊದಲು 13 ಕೋಟಿ ಮಾನವ ದಿನ ನಿಗದಿ ಮಾಡಿತ್ತು. ಡಿಸೆಂಬರ್ಗೆ ಗುರಿ ಸಾಧಿಸಲಾಗಿತ್ತು. ಆಗ ಹೆಚ್ಚುವರಿಯಾಗಿ 1.4 ಕೋಟಿ ಮಾನವ ದಿನ ನಿಗದಿ, ಆ ಗುರಿ ಜನವರಿಯಲ್ಲಿ ಮುಟ್ಟಲಾಗಿದೆ. ಆದ್ದರಿಂದ ಮತ್ತೆ ಹೆಚ್ಚುವರಿಯಾಗಿ 1.6 ಕೋಟಿ ಮಾನವ ದಿನ ನಿಗದಿಯಾಗಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣವಾಗಲಿದೆ. ಒಟ್ಟಾರೆ 16 ಕೋಟಿ ಮಾನವ ದಿನಗಳ ಬಳಕೆಯಾಗಿದೆ. ಕೇಂದ್ರ ಸರ್ಕಾರ 2022-23ನೇ ಸಾಲಿಗೆ ಮತ್ತೆ 13 ಕೋಟಿ ಮಾನವ ದಿನಗಳನ್ನು ನಿಗದಿ ಮಾಡಿದ್ದರೂ ಸಹ ರಾಜ್ಯ ಸರ್ಕಾರ 16 ಕೋಟಿ ಮಾನವ ದಿನಗಳ ಗುರಿ ಹಾಕಿಕೊಳ್ಳಲಿದೆ. 2021-22ನೇ ಸಾಲಿಗೆ ಒಟ್ಟಾರೆ 8169 ಕೋಟಿ ರೂ.ಗಳನ್ನು ಬಳಕೆ ಮಾಡಿದ್ದರೆ, 2022-23ಕ್ಕೆ 6630 ಕೋಟಿ ರೂ. ನಿಗದಿಯಾಗಿದೆ. ಆದರೆ ಈ ಪ್ರಮಾಣ ಮಾನವ ದಿನಗಳು ಹೆಚ್ಚಾದಂತೆ ಅನುದಾನವೂ ಹೆಚ್ಚಿಗೆ ಸಿಗುವ ವಿಶ್ವಾಸವಿದೆ.
ನರೇಗಾದಲ್ಲಿ ಗುರಿ ಮೀರಿ ಸಾಧನೆಯಾಗುತ್ತಿದೆ. ಇಲ್ಲಿನ ಪ್ರಗತಿಗೆ ಕೇಂದ್ರ ಸಹ ಮೆಚ್ಚುಗೆ ವ್ಯಕ್ತಪಡಿಸಿ ಮಾನವ ದಿನ ಹೆಚ್ಚು ಮಾಡುತ್ತಿದೆ. ಈ ವರ್ಷಕ್ಕೆ ಇನ್ನೂ 50 ಲಕ್ಷ ಮಾನವ ದಿನ ಬೇಕಾಗುತ್ತದೆ. ನರೇಗಾ ಯೋಜನೆಗೆ ಹಣಕಾಸಿನ ಕೊರತೆ ಸಹ ಇಲ್ಲ. ಹೊಸ ಹೊಸ ಪ್ರಯೋಗ ಮಾಡುತ್ತ ಗ್ರಾಮೀಣ ಭಾಗಕ್ಕೆ ಅನುಕೂಲ ಮಾಡಿಕೊಡುವ ಪ್ರಯತ್ನ ನಿರಂತರವಾಗಿ ನಡೆದಿದೆ. | ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ
ಇಂದು ನರೇಗಾ ಹಬ್ಬ: ಸೋಮವಾರ ನಡೆಯಲಿರುವ ನರೇಗಾ ಹಬ್ಬದಲ್ಲಿ ಹೊಸ ಕ್ಷೇತ್ರದಲ್ಲಿ ನರೇಗಾ ಜಾರಿ ಬಗ್ಗೆ ಪ್ರಕಟಿಸಲಿದೆ. ಪ್ರತಿ ವರ್ಷ ಫೆ.2 ಅನ್ನು ನರೇಗಾ ದಿನವನ್ನಾಗಿ ಕೇಂದ್ರ ಆಚರಿಸುತ್ತಿದೆ. ಈ ವರ್ಷ ಕರೊನಾ ಕಾರಣಕ್ಕೆ ವಿಳಂಬವಾಗಿದೆ. ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಭಾಗವಹಿಸುವರು.
ಅಭ್ಯಾಸಗಳಿಗೆ ಒತ್ತು: ನರೇಗಾದಲ್ಲಿ ಶುಚಿತ್ವ, ಸಾಮಾಜಿಕ ತಪಾಸಣೆ, ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ತಡವಾಗಿ ಬಿಲ್ ಆಗುವುದಕ್ಕೂ ಕಡಿವಾಣ ಹಾಕಲಾಗಿದೆ. ಆದ್ದರಿಂದ ಕಾರ್ವಿುಕರಿಗೆ ಸಮಯಕ್ಕೆ ಸರಿಯಾಗಿ ಹಣ ದೊರಕುವಂತೆ ಮಾಡಲಾಗಿದೆ. ಪರಿಶೀಲನೆ, ತರಬೇತಿ ಸಹ ನೀಡಲಾಗುತ್ತದೆ.
ನರೇಗಾದಲ್ಲಿ ಯಂತ್ರೋಪಕರಣದಿಂದ ಕೆಲಸ ಮಾಡಿಸಿ ಕಾರ್ವಿುಕರಿಗೆ ಅನ್ಯಾಯ ಮಾಡುವುದು, ಹಣ ದುರುಪಯೋಗದಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸುಧಾರಣೆ ಕ್ರಮ ಕೈಗೊಳ್ಳಲಾಗುತ್ತಿದೆ.