ಭರ್ಜರಿ ಮಳೆಗೆ ರಸ್ತೆಗಳು ಜಲಾವೃತ; ಚರಂಡಿ ನೀರಿನಲ್ಲಿ ಹೊಚ್ಚಿ ಹೋದ ತರಕಾರಿ, ಹಣ್ಣುಗಳು

6-RNR-04A
Published on

ರಾಣೆಬೆನ್ನೂರ: ನಗರ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗುಸಹಿತ ಗುರುವಾರ ಭರ್ಜರಿ ಜೋರು ಮಳೆ ಸುರಿಯಿತು. ಪರಿಣಾಮ ನಗರದಲ್ಲಿ ಜನಜೀವನ ಕೆಲಕಾಲ ಅಸ್ತವ್ಯಸ್ಥವಾಯಿತು. ನಿಧಾನವಾಗಿ ಆರಂಭವಾದ ಮಳೆ ನಂತರ ತೀವ್ರ ಸ್ವರೂಪ ಪಡೆಯಿತು. ಚರಂಡಿಗಳು ತುಂಬಿ ಹರಿದವು. ಎಂ.ಜಿ. ರಸ್ತೆ ಹಳ್ಳದಂತೆ ನೀರು ಹರಿಯುತ್ತಿರುವುದು ಕಂಡುಬಂತು.
ನಗರದ ಎಂ.ಜಿ. ರಸ್ತೆಯ ತರಕಾರಿ ಹಾಗೂ ಹಣ್ಣು ಮಾರುಕಟ್ಟೆಯಲ್ಲಿ ಚರಂಡಿ ನೀರು ಹೊಳೆಯಂತೆ ಹರಿದ ಪರಿಣಾಮ ತರಕಾರಿ, ಹಣ್ಣುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುಂತಾಗಿದೆ. ಚರಂಡಿಗಳು ಬ್ಲಾಕ್ ಆಗಿದ್ದರಿಂದ ಕೊಳಚೆ ನೀರು ಸಂಪೂರ್ಣ ಮಾರುಕಟ್ಟೆ ತುಂಬ ತುಂಬಿಕೊಂಡಿದೆ. ಇದರಿಂದ ನೆಲದ ಮೇಲೆ ಹಚ್ಚಿದ ತರಕಾರಿ, ಹಣ್ಣುಗಳು ನೀರು ಪಾಲಾದವು.
ಹಲವು ಬೈಕ್‌ಗಳು ನೀರಿನಲ್ಲಿ ಮುಳುಗುತ್ತಿದ್ದವು. ಮೇಡೇರಿ ರಸ್ತೆಯ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿತು. ಮನೆಯಲ್ಲಿನ ಕಿರಾಣಿ ಸಾಮಗ್ರಿ, ತರಕಾರಿಗಳು ಇನ್ನಿತರ ವಸ್ತುಗಳೂ ಸೇರಿ ವಿವಿಧ ಸರಕುಗಳು ಮಳೆನೀರಿನಿಂದಾಗಿ ಹಾನಿಗೊಂಡವು. ಜನರು ತಮ್ಮ ಮನೆಗಳಲ್ಲಿ ನುಗ್ಗಿದ ಮಳೆ ನೀರು ಹೊರಹಾಕಲು ಹರಸಾಹಸಪಡುತ್ತಿದ್ದ ದೃಶ್ಯ ಕಂಡುಬಂತು.
ಪ್ರತಿಸಾರಿ ಮಳೆಯಾದಾಗಲೂ ನಮ್ಮ ಮನೆಗಳಿಗೆ ಮಳೆ ನೀರು ನುಗ್ಗುತ್ತದೆ. ಇದಕ್ಕೆ ಅವೈಜ್ಞಾನಿಕ ರಾಜಕಾಲುವೆ ನಿರ್ಮಾಣ ಮತ್ತು ಒತ್ತುವರಿ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದರು. ನಗರಸಭೆ ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ವೈಜ್ಞಾನಿಕ ರಾಜ ಕಾಲುವೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಗಳು ಜಲಾವೃತ…
ನಗರದ ಎಂ.ಜಿ. ರಸ್ತೆ, ಮೇಡ್ಲೇರಿ ರಸ್ತೆ, ಹಳೆ ಪಿ.ಬಿ. ರಸ್ತೆಯ ಶಂಕರ ಚಿತ್ರಮಂದಿರದ ವೃತ್ತ, ಸಿದ್ದೇಶ್ವರ ನಗರದ ಬಳಿ ರಸ್ತೆಗಳು ಜಲಾವೃತಗೊಂಡು ನೀರು ರಸ್ತೆ ಮೇಲೆಯೆ ನಿಂತಿತ್ತು. ಮಳೆ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗಲಾಗದೆ ಈ ಸಮಸ್ಯೆ ಉಂಟಾಗಿತ್ತು.
ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮೇಡ್ಲೇರಿಯ ರಸ್ತೆಯ ಶ್ರೀ ಚೌಡೇಶ್ವರಿ ದೇವಸ್ಥಾನದ ರಸ್ತೆಯಲ್ಲೂ ಇದೇ ಸ್ಥಿತಿ ಇತ್ತು. ಎಡೆಬಿಡದೆ ಸುರಿದ ಮಳೆಯಿಂದ ಹಲವೆಡೆ ರಸ್ತೆಗಳು ಕೆರೆಯಂತಾಗಿ ಪರಿವರ್ತಿತವಾಗಿದ್ದವು.
ಮಧ್ಯಾಹ್ನದವರೆಗೂ ಬಿಸಿಲು ಇದ್ದ ಪರಿಣಾಮ ಮಳೆ ಸಂಭವ ಇರಲಿಲ್ಲ. ಸಂಜೆ ವೇಳೆಗೆ ನಗರ ವ್ಯಾಪ್ತಿ ಸೇರಿ ಹೊರವಲಯದ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಸರಿ ಸುಮಾರು 2 ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net