

ಕೋಲಾರ : ನಗರಸಭೆಯ ವಾಣಿಜ್ಯ ಮಳಿಗೆಗಳಲ್ಲಿನ ಅಂಗಡಿಗಳನ್ನು ವಿಲೇವಾರಿ ಮಾಡಲು ಮುಂದಾಗಿರುವ ಅಧಿಕಾರಿಗಳು ಯಶಸ್ವಿ ಬಿಡ್‌ದಾರದಲ್ಲದ ಹಾಲಿ ಅಂಗಡಿ ಮಾಲೀಕರಿಗೆ ಅಂಗಡಿ ತೆರವುಗೊಳಿಸಲು ಸೂಚನೆ ನೀಡಿದ್ದಾರೆ.
ನಗರಸಭೆಯ ವಿವಿಧ ವಾಣಿಜ್ಯ ಮಳಿಗೆಗಳಲ್ಲಿನ 226 ಅಂಗಡಿಗಳಿಗೆ ನಡೆದಿರುವ ಹರಾಜು ಸಂಬಂಧ ಹೈಕೋರ್ಟ್ ನಿರ್ದೇಶನ ಹಾಗೂ ವಕೀಲರ ಕಾನೂನು ಸಲಹೆಯಂತೆ ನಗರಸಭೆ ಕೌನ್ಸಿಲ್ ಠೇವಣಿ ಆಧಾರದಲ್ಲಿ ಕನಿಷ್ಠ ಬಾಡಿಗೆಗೆ ಯಶಸ್ವಿ ಬಿಡ್‌ದಾರರಿಗೆ ಹಂಚಿಕೆ ಮಾಡಲು ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡು ಠರಾವು ಅಂಗೀಕರಿಸಿತ್ತು.
ಕೌನ್ಸಿಲ್ ತೀರ್ಮಾನ ಸಂಬಂಧ ಯಶಸ್ವಿ ಬಿಡ್‌ದಾರರಿಗೆ ಅಂಗಡಿ ವಿಲೇವಾರಿ ಮಾಡುವ ಸಂಬಂಧ ಜಿಲ್ಲಾಧಿಕಾರಿ ನಿರ್ದೇಶನದಂತೆ ಕಾರ್ಯಪ್ರವೃತ್ತರಾದ ನಗರಸಭೆ ಪೌರಾಯುಕ್ತ ಪ್ರಸಾದ್ ಕಚೇರಿ ಸಿಬ್ಬಂದಿಯೊಂದಿಗೆ ಶತಶೃಂಗ ಕಾಂಪ್ಲೆಕ್ಸ್, ತರಕಾರಿ ಮಾರುಕಟ್ಟೆಯ ಮಳಿಗೆ ಸೇರಿ ಹರಾಜು ಕೂಗಿರುವ ಎಲ್ಲ ವಾಣಿಜ್ಯ ಮಳಿಗೆಗಳ ಬಳಿ ತೆರಳಿ ಯಶಸ್ವಿ ಬಿಡ್‌ದಾರರಿದ್ದಲ್ಲಿ ನಗರಸಭೆಗೆ ಸೂಕ್ತ ದಾಖಲೆ ಪತ್ರ ನೀಡಿ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು, ಯಶಸ್ವಿ ಬಿಡ್‌ದಾರರಲ್ಲದವರು ತಕ್ಷಣ ಅಂಗಡಿ ತೆರವು ಮಾಡಿ ನಗರಸಭೆ ವಶಕ್ಕೆ ನೀಡಬೇಕು ಎಂದು ಸೂಚನೆ ನೀಡಿದರು.
ಶತಶೃಂಗ ಕಾಂಪ್ಲೆಕ್ಸ್ ಸೇರಿ ಕೆಲವು ಮಳಿಗೆಗಳಲ್ಲಿ ಮೂಲ ಬಿಡ್‌ದಾರರು ಗುಡ್‌ವಿಲ್‌ಗೆ ಅಂಗಡಿಗಳನ್ನು ಬೇರೆಯವರಿಗೆ ನೀಡಿದ್ದು, ಹಾಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿ ವಾಗ್ವಾದಕ್ಕೆ ಇಳಿದಿದ್ದರು. ಮೂಲ ಬಿಡ್‌ದಾರರ ಜತೆಗಿನ ವ್ಯವಹಾರಗಳಿಗೂ ನಗರಸಭೆಗೂ ಸಂಬಂಧವಿಲ್ಲ, ಮೂರು ದಿನದೊಳಗೆ ಅಂಗಡಿ ವಶಕ್ಕೆ ನೀಡದಿದ್ದಲ್ಲಿ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಂದಾಯ ನಿರೀಕ್ಷಕ ಚಂದ್ರು, ಅಧಿಕಾರಿ ತ್ಯಾಗರಾಜ್ ಇತರರು ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಳಿಗೆ ವಿಲೇವಾರಿ ಸಂಬಂಧ ಆಟೋದಲ್ಲಿ ಧ್ವನಿವರ್ಧಕದ ಮೂಲಕ ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಲಾಯಿತು.