ಮಳಿಗೆ ಬಾಗಿಲು ಮುರಿದು ನಗದು, ಉಡುಪು ಕಳವು

Crime Logo
Published on

ಬೆಂಗಳೂರು : ಸಿದ್ಧ ಉಡುಪುಗಳ ಮಾರಾಟ ಮಳಿಗೆಯೊಂದರ ಗಾಜಿನ ಬಾಗಿಲ ಬೀಗ ಮುರಿದು ೧೯ ಸಾವಿರ ರೂ. ನಗದು ಹಾಗೂ ೧.೩೮ ಲಕ್ಷ ರೂ. ಮೌಲ್ಯದ ಸಿದ್ಧ ಉಡುಪುಗಳನ್ನು ಕಳವು ಮಾಡಲಾಗಿದೆ.
ಜಯನಗರ ೩ನೇ ಬ್ಲಾಕ್‌ನ ೧೧ನೇ ಮುಖ್ಯರಸ್ತೆಯ ಬಿಬಾ ಫ್ಯಾಷನ್ಸ್ ಲಿಮಿಟೆಡ್ ಸ್ಟೋರ್‌ನಲ್ಲಿ ಅ.೨ರ ತಡರಾತ್ರಿ ಈ ಘಟನೆ ನಡೆದಿದೆ. ಮಳಿಗೆಯ ವ್ಯವಸ್ಥಾಪಕ ಮೊಹಮ್ಮದ್ ಮಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಮೊಹಮ್ಮದ್ ಮಾಜ್ ಅ.೨ರಂದು ಬೆಳಗ್ಗೆಯಿಂದ ರಾತ್ರಿ ೧೦ ಗಂಟೆ ವರೆಗೆ ವ್ಯಾಪಾರ ನಡೆಸಿ ಬಳಿಕ ಬಾಗಿಲು ಮುಚ್ಚಿ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಅ.೩ ರಂದು ಬೆಳಗ್ಗೆ ೯.೩೦ಕ್ಕೆ ಮಳಿಗೆ ತೆರೆಯಲು ಬಂದಾಗ, ಗಾಜಿನ ಬಾಗಿಲ ಬೀಗ ಮುರಿದು ಕಂಡು ಬಂದಿದೆ. ಒಳಗೆ ತೆರಳಿ ಪರಿಶೀಲಿಸಿದಾಗ ಕ್ಯಾಶ್ ಬಾಕ್ಸ್‌ನಲ್ಲಿದ್ದ ೧೯ ಸಾವಿರ ರೂ. ನಗದು ಹಾಗೂ ಮಳಿಗೆಯಲ್ಲಿದ್ದ ಸುಮಾರು ೧.೩೮ ಲಕ್ಷ ರೂ. ಮೌಲ್ಯದ ಉಡುಪುಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವುದು ಕಂಡು ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಗಿದೆ. ಘಟನಾ ಸ್ಥಳದ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net