

ಶಿವಮೊಗ್ಗ: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಪ್ರದೇಶದ 3,667 ಎಕರೆ ಸರ್ಕಾರಿ ಭೂಮಿ ಮಾರಾಟ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.
ಪ್ರತಿ ಎಕರೆಗೆ 3 ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು 1.22 ಲಕ್ಷ ರೂ.ನಂತೆ ಮಾರಾಟ ಮಾಡುವ ರಾಜ್ಯ ಸರ್ಕಾರದ ತೀರ್ಮಾನ ಒಪ್ಪುವಂತಹದ್ದಲ್ಲ. ಉದ್ಯೋಗ ಸೃಷ್ಟಿ ಹೆಸರಿನಲ್ಲಿ ಮಂಕುಬೂದಿ ಎರಚಿ ಅಮೂಲ್ಯ ಸಾರ್ವಜನಿಕ ಆಸ್ತಿಯನ್ನು ಬಹುತೇಕ ಉಚಿತವಾಗಿ ಜಿಂದಾಲ್ ಉಕ್ಕು ಕಾರ್ಖಾನೆಗೆ ನೀಡುತ್ತಿರುವುದು ಮಹಾ ವಂಚನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹಿಂದಿನ ಬಿಜೆಪಿ ಸರ್ಕಾರ, ಇದೇ ರೀತಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡಲು ಹೊರಟಾಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ವಿರೋಧಿಸಿತ್ತು. ಜನಾಭಿಪ್ರಾಯಕ್ಕೆ ಮಣಿದ ಬಿಜೆಪಿ ಸರ್ಕಾರ ಕೈ ಬಿಟ್ಟಿದ ಮಾರಾಟ ಪ್ರಕ್ರಿಯೆಯನ್ನು ಮುಜುಗರ ಇಲ್ಲದೇ ಕಾಂಗ್ರೆಸ್ ಸರ್ಕಾರ ಮಾರಾಟ ಮಾಡಲು ಹೊರಟಿರುವುದು ಆತ್ಮವಂಚನೆಯ ಪರಮಾವಧಿ ಎಂದು ಕಿಡಿಕಾರಿದರು.
ಕಾರ್ಖಾನೆಗೆ ಬೇಕಾದ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಲೀಸ್ ಪಡೆದಿದ್ದ ಜಿಂದಾಲ್ ಕಾರ್ಖಾನೆಗೆ ಅತ್ಯಂತ ಅಗ್ಗದ ದರಕ್ಕೆ ಕ್ರಯಕ್ಕೆ ಕೊಡಬೇಕಾದ ಅಗತ್ಯ ಇರಲಿಲ್ಲ. ಪೊಲೀಸ್ ಹಾಗೂ ಕಾನೂನು ಬಲ ಬಳಸಿ ಬಲವಂತವಾಗಿ ಭೂ ಸ್ವಾಧೀನಕ್ಕೆ ಒಳಪಡಿಸಿಕೊಂಡು, ಕಿತ್ತುಕೊಂಡ ರೈತರ ಭೂಮಿ ಹೇಗೆ ದೈತ್ಯ ಉದ್ದಿಮೆ ಮಾಲೀಕರ ಖಾಸಗಿ ಆಸ್ತಿಯಾಗುತ್ತದೆ ಎಂಬುದಕ್ಕೆ ಜಿಂದಾಲ್ ಭೂಮಿ ಹಗರಣ ಸಾಕ್ಷಿ ಎಂದರು.
ಸರ್ಕಾರದಿಂದ ಭೂಮಿ, ನೀರು, ವಿದ್ಯುತ್, ಬಂಡವಾಳಕ್ಕೆ ಸಾಲ, ಬಡ್ಡಿ ವಿನಾಯಿತಿ, ತೆರಿಗೆ ರಿಯಾಯಿತಿ, ಸಾಲಮನ್ನಾ ಅಲ್ಲದೇ ಉತ್ಪಾದನಾ ಆಧಾರಿತ ಸಬ್ಸಿಡಿ ಹೀಗೆ ಪ್ರತಿಯೊಂದನ್ನು ಪಡೆಯುವ ಖಾಸಗಿ ಉದ್ದಿಮೆದಾರರು ಅರ್ಥಪೂರ್ಣ ಉದ್ಯೋಗ ಸೃಷ್ಟಿ ಮಾಡದೇ ರೈತರು, ಸಾರ್ವಜನಿಕ ಸಂಪತ್ತು ಹಾಗೂ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ರವಿ ಸುದ್ದಿಗೋಷ್ಠಿಯಲ್ಲಿದ್ದರು.
ಈವರೆಗೂ ಆಳಿದ ಸರ್ಕಾರಗಳು ರೈತರಿಂದ ಮತ್ತು ಕಂದಾಯ ಭೂಮಿಯಿಂದ ಎಷ್ಟು ಭೂಮಿ ವಶಪಡಿಸಿಕೊಂಡಿದ್ದಾರೆ. ಭೂಮಿ ಕೊಟ್ಟವರ ಪರಿಸ್ಥಿತಿ ಏನಾಗಿದೆ. ಭೂಮಿ ತೆಗೆದುಕೊಂಡವರು, ಯಾವ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದು, ಏತಕ್ಕಾಗಿ ಬಳಸುತ್ತಿದ್ದಾರೆ. ಇದರ ಒಟ್ಟಾರೆ ಮೊತ್ತವೇನು?. ಈ ಎಲ್ಲ ವಿಷಯಗಳನ್ನು ಒಳಗೊಂಡಂತೆ ಒಂದು ಶ್ವೇತಪತ್ರವನ್ನು ರಾಜ್ಯ ಸರ್ಕಾರ ಹೊರಡಿಸಬೇಕು.- ಎಚ್.ಆರ್.ಬಸವರಾಜಪ್ಪರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ