ಪಾಕಿಸ್ತಾನದ ಗುರುದ್ವಾರದ ಮೇಲೆ ಉದ್ರಿಕ್ತ ಮುಸ್ಲಿಂರ ಕಲ್ಲು ತೂರಾಟ; ಹುಡುಗಿ ಮತಾಂತರವೇ ಅವಘಡಕ್ಕೆ ಕಾರಣವೇ?!

PAK
Published on

ನವದೆಹಲಿ: ಪಾಕಿಸ್ತಾನದಲ್ಲಿರುವ ನನಕಾನಾ ಗುರುದ್ವಾರದ ಸುತ್ತ ನೆರೆದಿರುವ ಮುಸ್ಲಿಂರು ಕಲ್ಲು ತೂರಾಟ ನಡೆಸಿದ್ದು, ಗುರುದ್ವಾರವನ್ನು ಧ್ವಂಸ ಮಾಡುವ ಬೆದರಿಕೆ ಹಾಕಿದ್ದಾರೆ.

ಸ್ಥಳೀಯ ನೂರಾರು ಮುಸ್ಲಿಂರು ಶುಕ್ರವಾರ ಸಂಜೆ ನನಕಾನಾ ಗುರುದ್ವಾರ ಸುತ್ತ ಸೇರಿದ್ದು ದೇಗುಲದ ಮೇಲೆ ಕಲ್ಲು ತೂರಿದ್ದಾರೆ.

ಅಲ್ಲಿ ಸೇರಿರುವ ಮುಸ್ಲಿಂ ಗುಂಪನ್ನು ಮಹಮ್ಮದ್​ ಹಸ್ಸನ್​ ಎಂಬಾತನ ಸೋದರ ನೇತೃತ್ವ ವಹಿಸಿದ್ದಾನೆ. ಗುರುದ್ವಾರದ ಮುಖ್ಯಸ್ಥನ ಮಗಳಾದ ಜಗ್ಜಿತ್​ ಕೌರ್​ ಎಂಬಾಕೆಯನ್ನು ಅಪಹರಿಸಿ ಮತಾಂತರ ಮಾಡಿದ್ದಾನೆ.

ಅಲ್ಲಿ ಸೇರಿದ್ದ ಉದ್ರಿಕ್ತ ಗುಂಪು, "ಇಲ್ಲಿ ಗುರುದ್ವಾರ ಇರಲು ಬಿಡುವುದಿಲ್ಲ. ಇದನ್ನು ಧ್ವಂಸ ಮಾಡಬೇಕು ಎಂದು ಕೂಗುತ್ತಿದ್ದಾರೆ. ಅಲ್ಲದೆ ಈ ಸ್ಥಳದ ನನಕಾನಾ ಸಾಹಿಬ್​ ಎಂಬ ಹೆಸರನ್ನು ತೆಗೆದು ಅದಕ್ಕೆ ಗುಲಾಮ್​ ಎ ಮುಸ್ತಾಫ್​ ಎಂದು ಹೆಸರಿಡುತ್ತೇವೆ. ನನಕಾನಾದಲ್ಲಿನ್ನು ಸಿಖ್​ರು ಇರುವಂತಿಲ್ಲ" ಎಂಬ ಘೋಷಣೆ ಕೂಗುತ್ತಿದ್ದಾರೆ.

ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಗುಂಪಿನ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಗುರುವಾರವಷ್ಟೇ ಇಲ್ಲಿ ಗುರು ಗೋವಿಂದ್​ ಸಿಂಗ್​ ಜಯಂತಿಯನ್ನು ಆಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುದ್ವಾರದಲ್ಲಿ ಶುಕ್ರವಾರವೂ ಜನ ಜಂಗುಳಿ ಇತ್ತು. ಕಲ್ಲು ತೂರಾಟ ಸಮಯದಲ್ಲಿ ಒಳಗಿದ್ದ ಭಕ್ತರು ಆತಂಕಕ್ಕೆ ಈಡಾಗಿದ್ದರು.

ಜಗ್ಜಿತ್​ ಕೌರ್​ ಅಲ್ಲ ಆಯೇಷಾ!

ಸಿಖ್​ರ ಹುಡುಗಿಯನ್ನು ಅಪಹರಿಸಿ, ಮತಾಂತರ ಮಾಡಿದ ಮಹಮ್ಮದ್​ ಹಸನ್​ ಸೋದರ ಈ ಉದ್ರಿಕ್ತ ಗುಂಪಿನ ನಾಯಕ. ಆತನ ಪ್ರಕಾರ ಮತಾಂತರ ಮಾಡಿ, ಮದುವೆಯಾಗಿದ್ದಕ್ಕೆ ತನ್ನ ಸೋದರನಿಗೆ ಥಳಿಸಲಾಗಿದೆ.

ಕುಟುಂಬದ ಪ್ರಕಾರ ಮತಾಂತರಗೊಂಡ ಆ ಸಿಖ್​ ಹುಡುಗಿಗೆ ಈಗ ಆಯೇಷಾ ಎಂದು ಹೆಸರಿಡಲಾಗಿದೆ. ಆಕೆ ಮತ್ತೆ ಮತಾಂತರವಾಗಲು ನಿರಾಕರಿಸಿದ್ದಾಳೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net