

ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ ಕಳವು ಮಾಡಿ ನಕಲಿ ಆರ್‌ಸಿ ಕಾರ್ಡ್ ಮಾಡಿಕೊಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪೀಣ್ಯದ ಇಂದಿರಾ ಪ್ರಿಯದರ್ಶಿನಿ ನಗರದ ಶ್ರೀಧರ್ (29) ಮತ್ತು ಕೆ.ಪಿ. ಅಗ್ರಹಾರದ ಸಂತೋಷ್ (20) ಬಂಧಿತರು. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸಂತೋಷ್, ರಾಜಾಜಿನಗರ ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್ ಆಗಿಯೂ ಕೆಲಸ ಮಾಡುತ್ತಿದ್ದ. ಕ್ಯಾಬ್ ಚಾಲಕನಾಗಿದ್ದ ಶ್ರೀಧರ್, ಕಳ್ಳ ದಂಧೆಗೆ ಇಳಿದ ಮೇಲೆ ಚಾಲಕ ವೃತ್ತಿ ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಾಜಿನಗರ ಆರ್‌ಟಿಒ ಕಚೇರಿಯ ಬ್ರೋಕರ್ ಸಂತೋಷ್, ಕೆಲಸ ನಿಮಿತ್ತ ಒಳಗೆ ಹೋದಾಗ ಅಧಿಕಾರಿಗಳ ಗಮನಕ್ಕೆ ಬಾರದ ರೀತಿಯಲ್ಲಿ ರದ್ಧಾದ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳನ್ನು ಕಳವು ಮಾಡುತ್ತಿದ್ದ. ಆ ನಂತರ ಶ್ರೀಧರ್ ಜತೆ ಸೇರಿ ಸ್ಮಾರ್ಟ್‌ಕಾರ್ಡ್‌ಗಳ ಮೇಲೆ ಮೊದಲು ಪ್ರಿಂಟ್ ಆಗಿದ್ದ ಮಾಲೀಕರ ಹೆಸರನ್ನು ಥಿನ್ನರ್‌ನಲ್ಲಿ ಅಳಿಸಿ ಮರುಮುದ್ರಣ ಮಾಡಿ ಬೈಕ್ ಮತ್ತು ಕಾರು ಚಾಲಕರಿಗೆ ಮಾರಾಟ ಮಾಡುತ್ತಿದ್ದರು. ಕಾರಿನ ನಕಲಿ ಆರ್‌ಸಿ ಕಾರ್ಡ್‌ಗೆ 3 ರಿಂದ 4 ಸಾವಿರ ರೂ. ಹಾಗೂ ಬೈಕ್‌ಗೆ 500 ರೂ. ರಿಂದ 1 ಸಾವಿರ ರೂ. ಪಡೆಯುತ್ತಿದ್ದರು.
ಆ್ಯಪ್ ಆಧಾರಿತ ಕ್ಯಾಬ್ ಚಾಲಕರಿಗೆ ವಾಹನದ ವಿಮಾ ಪಾಲಿಸಿ ಕಡ್ಡಾಯವಾಗಿರುತ್ತದೆ. ಆದರೆ, ವಿಮಾ ಮೊತ್ತ ಹೆಚ್ಚು ಇರುವುದರಿಂದ ಪಾಲಿಸಿ ಪಡೆಯಲು ಸಾಧ್ಯವಾಗದೆ ಐನೂರು ಸಾವಿರ ರೂ. ಕೊಟ್ಟು ನಕಲಿ ಪಾಲಿಸಿಗಳನ್ನು ಪಡೆಯುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ವೇಳೆ 135 ಕಾರು ಮತ್ತು ಬೈಕ್‌ಗಳಿಗೆ ನಕಲಿ ಆರ್‌ಸಿ ಕಾರ್ಡ್‌ಗಳನ್ನು ಕೊಟ್ಟಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಮತ್ತು ಕಾರುಗಳನ್ನು ಅಡವಿಟ್ಟು ಹಣ ಪಡೆದಿದ್ದ ವಾಹನ ಮಾಲೀಕರು, ಸಾಲ ತೀರಿಸಿ ಆರ್‌ಸಿ ಕಾರ್ಡ್ ಪಡೆಯಲು ಸಾಧ್ಯವಾಗದೆ ಇದ್ದಾಗ ಆರೋಪಿಗಳನ್ನು ಸಂಪರ್ಕ ಮಾಡುತ್ತಿದ್ದರು. ಹಣ ಕೊಟ್ಟು ನಕಲಿ ಆರ್‌ಸಿ ಸ್ಮಾರ್ಟ್ ಕಾರ್ಡ್ ಖರೀದಿಸುತ್ತಿದ್ದರು. ಆರ್‌ಟಿಒ ಕಚೇರಿಗೆ ನವೀಕರಣ ಅಥವಾ ಹೊಸ ಕಾರ್ಡ್ ಪಡೆಯಲು ಹಳೆಯ ಕಾರ್ಡ್‌ಗಳನ್ನು ಕೊಟ್ಟು ಹೊಸದು ಪಡೆಯುತ್ತಿದ್ದರು. ಈ ರೀತಿ ರದ್ದಾದ ಕಾರ್ಡ್‌ಗಳನ್ನು ಆರೋಪಿಗಳು ಕದ್ದು ನಕಲಿ ಕೃತ್ಯಕ್ಕೆ ಬಳಸುತ್ತಿದ್ದರು.