3ನೇ ದಿನವೂ ಷೇರುಪೇಟೆ ಏರುಮುಖ

6-67fff9722019e
Published on

ಮುಂದುವರಿದ ಗೂಳಿ ಓಟ | 77,000 ದಾಟಿದ ಸೆನ್ಸೆಕ್ಸ್, 108 ಅಂಕ ಹೆಚ್ಚಾದ ನಿಫ್ಟಿ

ಮುಂಬೈ: ಬ್ಯಾಂಕಿಂಗ್ ಷೇರುಗಳ ಖರೀದಿ ಭರಾಟೆ, ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳ, ಚಿಲ್ಲರೆ ಹಣದುಬ್ಬರ 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ ಮುಂತಾದ ಕಾರಣಗಳಿಂದಾಗಿ ಭಾರತೀಯ ಷೇರುಪೇಟೆ ಸತತ ಮೂರನೇ ದಿನವಾದ ಬುಧವಾರವೂ ಏರುಗತಿ ದಾಖಲಿಸಿದೆ.

ಜಾಗತಿಕ ಮಾರುಕಟ್ಟೆ ಪ್ರವೃತ್ತಿ ದುರ್ಬಲವಾಗಿದ್ದರೂ ತೀವ್ರ ಏರಿಳಿತದ ವಹಿವಾಟಿನ ಕೊನೆಯಲ್ಲಿ ಸೆನ್ಸೆಕ್ಸ್ 309 ಅಂಕ ಹೆಚ್ಚಾಗಿ ಎರಡು ವಾರಗಳ ಗರಿಷ್ಠ ಮಟ್ಟವಾದ 77,044ಕ್ಕೆ ತಲುಪಿತು. ಒಂದು ಹಂತದಲ್ಲಿ ಅದು 566 ಅಂಕ ಏರಿಕೆ ಕಂಡಿತ್ತು. ನಿಫ್ಟಿ ಕೂಡ 108 ಅಂಕ ಏರಿಕೆ ದಾಖಲಿಸಿ 23,437ಕ್ಕೆ ಮುಟ್ಟಿತು.

ಇಂಡಸ್​ಇಂಡ್ ಬ್ಯಾಂಕ್ ಷೇರುಗಳು ಶೇ. 7.12ರಷ್ಟು, ಆಕ್ಸಿಸ್ ಬ್ಯಾಂಕ್ ಶೇ. 4.26, ಅದಾನಿ ಪೋರ್ಟ್ಸ್ ಶೇ. 1.81ರಷ್ಟು ಏರಿಕೆ ದಾಖಲಿಸಿದವು. ಏಷ್ಯನ್ ಪೇಂಟ್ಸ್, ಎಚ್​ಡಿಎಫ್​ಸಿ ಬ್ಯಾಂಕ್, ಭಾರ್ತಿ ಏರ್​ಟೆಲ್, ಎಸ್​ಬಿಐ, ಐಟಿಸಿ ಕೂಡ ಲಾಭ ಮಾಡಿದವು. ಮಾರುತಿ ಶೇ. 1.51ರಷ್ಟು ನಷ್ಟ ಅನುಭವಿಸಿತು. ಟಾಟಾ ಮೋಟರ್ಸ್, ಇನ್​ಫೋಸಿಸ್, ಎಲ್ ಆಂಡ್ ಟಿ, ಎನ್​ಟಿಪಿಸಿ, ಬಜಾಜ್ ಫೈನಾನ್ಸ್ ಕೂಡ ಹಿಂದುಳಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 6,065 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

ವಿದೇಶಗಳಲ್ಲಿ ಹೇಗಿತ್ತು?: ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕೊಸ್ಪಿ, ಟೋಕಿಯೋದ ನಿಕ್ಕಿ 225, ಹಾಂಗ್​ಕಾಂಗ್​ನ ಹ್ಯಾಂಗ್ ಸೆಂಗ್ ಇಳಿಕೆ ದಾಖಲಿಸಿದವು. ಚೀನಾದ ಶಾಂಘೈ ಏರಿಕೆ ದಾಖಲಿಸಿತು. ಯೂರೋಪಿಯನ್ ಮಾರುಕಟ್ಟೆಗಳೂ ಇಳಿಮುಖವಾಗಿದ್ದವು.

ಇಷ್ಟಕ್ಕೇ ನಿಲ್ಲುವುದಿಲ್ಲ ಚಿನ್ನದ ನಾಗಾಲೋಟ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಬುಧವಾರ 98,100 ರೂ.ಗೆ ತಲುಪಿದ್ದು, ಎಲ್ಲಿಯವರೆಗೆ ಅಮೆರಿಕ-ಚೀನಾ ನಡುವಿನ ವ್ಯಾಪಾರ ಸಮರಕ್ಕೆ ಪರಿಹಾರ ಗೋಚರಿಸುವುದಿಲ್ಲವೋ ಅಲ್ಲಿಯವರೆಗೆ ಈ ನಾಗಾಲೋಟ ಮುಂದು ವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಭೌಗೋಳಿಕ ರಾಜಕೀಯ ಅನಿಶ್ಚಿತತೆಯೇ ಇಂದಿನ ಸಾರ್ವಕಾಲಿಕ ಏರಿಕೆಗೆ ಕಾರಣ. ಅಮೆರಿಕ- ಚೀನಾ ಮಧ್ಯೆ ಪ್ರಕ್ಷುಬ್ಧತೆ ಹೆಚ್ಚುತ್ತಲೇ ಇದೆ. ಅದು ಕಡಿಮೆಯಾಗುತ್ತದೆ ಎಂಬ ಸ್ಪಷ್ಟ ಸಂದೇಶ ಸಿಗುವವರೆಗೂ ಚಿನ್ನದ ಬೆಲೆ ಏರುತ್ತಿರುತ್ತದೆ’ ಎಂದು ಎಲ್​ಕೆಪಿ ಸೆಕ್ಯುರಿಟೀಸ್​ನ ಸಂಶೋಧನಾ ವಿಭಾಗದ ವಿಶ್ಲೇಷಕ ಜತೀನ್ ತ್ರಿವೇದಿ ತಿಳಿಸಿದ್ದಾರೆ. ಕೋಟಕ್ ಸೆಕ್ಯುರಿಟೀಸ್​ನ ಕಮಾಡಿಟಿ ರೀಸರ್ಚ್ ವಿಭಾಗದ ಸಹಾಯಕ ಉಪಾಧ್ಯಕ್ಷ ಕಾಯ್ನಾತ್ ಚೈನ್​ವಾಲಾ, ಅಬನ್ಸ್ ಫೈನಾನ್ಷಿಯಲ್ ಸರ್ವಿಸಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಂತನ್ ಮೆಹ್ತಾ, ಎಚ್​ಡಿಎಫ್​ಸಿ ಸೆಕ್ಯುರಿಟೀಸ್​ನ ಕಮಾಡಿಟಿ ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಮುಂತಾದವರು ಕೂಡ ಇದೇ ರೀತಿಯ ಅಭಿಮತ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net