

ಮುಂಬೈ: ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಷೇರುಗಳ ಖರೀದಿ ಹೆಚ್ಚಳ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬುಧವಾರ ಏರಿಕೆ ದಾಖಲಿಸಿದ್ದು, ಮೂರು ದಿನಗಳ ಇಳಿಕೆ ಪ್ರವೃತ್ತಿ ಕೊನೆಗೊಂಡಿದೆ. ದಿನದ ವಹಿವಾಟಿನ ನಡುವೆ 835 ಅಂಕ ಏರಿಕೆಯಾಗಿ 82,021ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 410 ಅಂಕ ಏರಿಕೆ ದಾಖಲಿಸಿ 81,596ಕ್ಕೆ ಸ್ಥಿರವಾಯಿತು. ನಿಫ್ಟಿ 129 ಅಂಕ ಏರಿಕೆಯಾಗಿ 24,813ಕ್ಕೆ ಸ್ಥಿರಗೊಂಡಿತು. ಬಜಾಜ್ ಫಿನ್ಸರ್ವ್ ಶೇ. 2.02ರಷ್ಟು ಏರಿಕೆಯಾಯಿತು. ಟಾಟಾ ಸ್ಟೀಲ್, ಸನ್ಫಾರ್ವ, ಟೆಕ್ ಮಹಿಂದ್ರಾ, ಬಜಾಜ್ ಫೈನಾನ್ಸ್, ಎನ್ಟಿಪಿಸಿ, ನೆಸ್ಲೆ, ಟಾಟಾ ಮೋಟರ್ಸ್, ಹಿಂದುಸ್ತಾನ್ ಯುನಿಲಿವರ್, ಮಹಿಂದ್ರಾ ಆಂಡ್ ಮಹಿಂದ್ರಾ ಷೇರುಗಳು ಕೂಡ ಲಾಭ ಗಳಿಸಿದವು. ಇಂಡಸ್ಇಂಡ್ ಬ್ಯಾಂಕ್ನ ಷೇರು ಶೇ. 1.39ರಷ್ಟು ಕುಸಿಯಿತು. ಕೋಟಕ್ ಮಹಿಂದ್ರಾ ಬ್ಯಾಂಕ್, ಪವರ್ಗ್ರಿಡ್, ಐಟಿಸಿ ಷೇರುಗಳೂ ನಷ್ಟ ಅನುಭವಿಸಿದವು.
ನವದೆಹಲಿ: ಜಾಗತಿಕ ಅನಿಶ್ಚಿತತೆ ಹೆಚ್ಚುತ್ತಿದ್ದಂತೆಯೇ ಮತ್ತೆ ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಹೂಡಿಕೆದಾರರ ಗಮನ ಜಾಸ್ತಿಯಾಗಿದ್ದು, ಇದರಿಂದಾಗಿ ಬುಧವಾರ ಚಿನ್ನದ ದರ 1,910 ರೂ. ಏರಿಕೆಯಾಗಿದೆ. ಮಂಗಳವಾರ 10 ಗ್ರಾಂಗೆ 96,540 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ದರ ಬುಧವಾರ 98,450 ರೂ.ಗೆ ಏರಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 96,130 ರೂ. ಇದ್ದದ್ದು ಬುಧವಾರ 1,870 ರೂ. ಹೆಚ್ಚಳವಾಗಿ 98 ಸಾವಿರ ರೂ.ಗೆ ತಲುಪಿತು. ಇದೇ ವೇಳೆ, ಬೆಳ್ಳಿಯ ಬೆಲೆ 1,660 ರೂ. ಏರಿಕೆಯಾಗಿದೆ. ಮಂಗಳವಾರ ಕೆಜಿಗೆ 97,500 ರೂ. ಇದ್ದ ಬೆಳ್ಳಿ ದರ ಬುಧವಾರ 99,160 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.