

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 2ನೇ ದಿನವಾದ ಮಂಗಳವಾರ (ಆ.26) ಭಾರೀ ಕುಸಿತ ಕಂಡಿವೆ. ಈ ಮೂಲಕ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು 6 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಸೆನ್ಸೆಕ್ಸ್ 849 ಪಾಯಿಂಟ್ಸ್ ಅಥವಾ ಶೇ.1.04 ರಷ್ಟು ಕುಸಿದು 80,786.54 ಕ್ಕೆ ಮುಕ್ತಾಯವಾದರೆ, ನಿಫ್ಟಿ50 256 ಪಾಯಿಂಟ್ಸ್ ಅಥವಾ ಶೇ.1.02 ರಷ್ಟು ಕುಸಿತದೊಂದಿಗೆ 24,712.05ಕ್ಕೆ ಕೊನೆಗೊಂಡಿತು. BSE ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.34 ಮತ್ತು ಶೇಕಡಾ 1.68 ರಷ್ಟು ಕುಸಿದಿವೆ.
ನಿಫ್ಟಿ ಸೂಚ್ಯಂಕದಲ್ಲಿ 41 ಷೇರುಗಳು ನಷ್ಟದಲ್ಲಿ ಕೊನೆಗೊಂಡಿದ್ದು, ಅವುಗಳಲ್ಲಿ ಶ್ರೀರಾಮ್ ಫೈನಾನ್ಸ್ (ಶೇ. 4.03 ರಷ್ಟು ಕುಸಿತ), ಸನ್ ಫಾರ್ಮಾ (ಶೇ. 3.35 ರಷ್ಟು ಕುಸಿತ) ಮತ್ತು ಟಾಟಾ ಸ್ಟೀಲ್ (ಶೇ. 2.87 ರಷ್ಟು ಕುಸಿತ) ಅಗ್ರಸ್ಥಾನದಲ್ಲಿವೆ.
ಇನ್ನು ಬಿಎಸ್ಇ ಸೂಚ್ಯಂಕದಲ್ಲಿ ನೊವಾಟಿಯರ್ ರಿಸರ್ಚ್ ಲ್ಯಾಬೋರೇಟರೀಸ್, ವಿಷನ್ ಸಿನಿಮಾಸ್, ಸಯಾಜಿ ಹೋಟೆಲ್ಸ್ (ಪುಣೆ), ಎನ್ಪಿಆರ್ ಫೈನಾನ್ಸ್ ಮತ್ತು ಗುಜರಾತ್ ಸ್ಟೇಟ್ ಫೈನಾನ್ಷಿಯಲ್ ಕಾರ್ಪೊರೇಷನ್ ಬಿಎಸ್ಇಯಲ್ಲಿ ಶೇ.10 ಕ್ಕಿಂತ ಹೆಚ್ಚು ಕುಸಿತ ಕಂಡ ಎಂಟು ಷೇರುಗಳಲ್ಲಿ ಸೇರಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಘೋಷಣೆ ಮಾಡಿದ್ದು, ಆ.27ರಂದಿ ಶೇ.50 ಸುಂಕ ಜಾರಿಗೆ ಬರಲಿದೆ. ಈ ಈ ಹಿನ್ನೆಲೆ ಭಾರತೀಯ ಷೇರುಪೇಟೆಗಳು ತೀವ್ರ ಮಾರಾಟದ ಒತ್ತಡಕ್ಕೆ ಒಳಗಾದವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್)