8ನೇ ದಿನವೂ ಷೇರುಪೇಟೆ ಕುಸಿತ

ShareMarket
Published on

ಮುಂಬೈ: ವಿದೇಶಿ ಹೂಡಿಕೆಯ ನಿರಂತರ ಹೊರಹರಿವು ಮತ್ತು ಆರ್​ಬಿಐನ ಬಡ್ಡಿದರ ನಿರ್ಧಾರದ ನಿರೀಕ್ಷೆಯ ಹಿನ್ನೆಲೆಯಲ್ಲಿ ಮಂಗಳವಾರ ಷೇರು ಮಾರುಕಟ್ಟೆ ತೀವ್ರ ಏರಿಳಿತ ಕಂಡಿತಲ್ಲದೆ, ದಿನದ ಕೊನೆಗೆ ಇಳಿಕೆಯಲ್ಲಿ ಮುಕ್ತಾಯಗೊಂಡಿತು. ಷೇರುಪೇಟೆ ಕುಸಿಯುತ್ತಿರುವುದು ಇದು ಸತತ ಎಂಟನೇ ದಿನವಾಗಿದೆ. ದಿನದ ವಹಿವಾಟಿನಲ್ಲಿ 80,677.82ರ ಗರಿಷ್ಠ ಮತ್ತು 80,201.15ರ ಕನಿಷ್ಠ ಮಟ್ಟವನ್ನು ತಲುಪಿ ಹೊಯ್ದಾಡಿದ ಸೆನ್ಸೆಕ್ಸ್, ಕೊನೆಗೆ 97.32 ಅಂಕಗಳ ಕುಸಿತದೊಂದಿಗೆ 80,267.62ರಲ್ಲಿ ಸ್ಥಿರವಾಯಿತು. ಕಳೆದ 8 ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 2,746.34 ಅಂಕಗಳಷ್ಟು ಕುಸಿದಿದೆ. ನಿಫ್ಟಿ 23.80 ಅಂಕಗಳ ಕುಸಿತದೊಂದಿಗೆ 24,611.10ಕ್ಕೆ ಇಳಿಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 2,831.59 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 1ರಷ್ಟು ಕುಸಿದು 67.29 ಡಾಲರ್​ಗೆ ತಲುಪಿದೆ.

ರೂಪಾಯಿ ಮತ್ತಷ್ಟು ಕುಸಿತ: ಜಾಗತಿಕ ವ್ಯಾಪಾರ ಅನಿಶ್ಚಿತತೆಯಿಂದ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವಿನ ಒತ್ತಡದಿಂದ ಮಂಗಳವಾರ ರೂಪಾಯಿಯ ಬೆಲೆ 4 ಪೈಸೆ ಕುಸಿದು ಅಮೆರಿಕನ್ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 88.79ಕ್ಕೆ ತಲುಪಿತು. ಅಂತರ್​ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿಯ ವಹಿವಾಟು 88.73ರಲ್ಲಿ ಆರಂಭವಾಗಿ 88.69-88.80ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಸೋಮವಾರ ರೂಪಾಯಿ 3 ಪೈಸೆ ಕುಸಿದು 88.75ಕ್ಕೆ ಮುಕ್ತಾಯಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net