

ನವದೆಹಲಿ: ಆರ್ಥಿಕ, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ ಷೇರುಗಳ ಭಾರಿ ಮಾರಾಟ ಮತ್ತು ವಿದೇಶಿ ಹೂಡಿಕೆಯ ನಿರಂತರ ಹೊರಹರಿವಿನಿಂದ ಶುಕ್ರವಾರ ಷೇರು ಮಾರುಕಟ್ಟೆ ಸತತ ಎರಡನೇ ದಿನ ಕುಸಿತ ಕಂಡಿದೆ.
ದಿನದ ವಹಿವಾಟಿನ ವೇಳೆ 786.48 ಅಂಕ ಕುಸಿದು 81,397.69ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 721.08 ಅಂಕ ಕುಸಿದು ಒಂದು ತಿಂಗಳಿಗಿಂತ ಕಡಿಮೆ ಮಟ್ಟವಾದ 81,463.09ಕ್ಕೆ ತಲುಪಿತು. ನಿಫ್ಟಿ 225.10 ಅಂಕ ಕುಸಿದು 24,837ಕ್ಕೆ ತಲುಪಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 2,133.69 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಡೇಟಾ ತಿಳಿಸಿದೆ.
ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.32ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 69.40 ಡಾಲರ್ ತಲುಪಿದೆ. ಎರಡು ದಿನಗಳ ತೀವ್ರ ಕುಸಿತದಿಂದ ಹೂಡಿಕೆದಾರರ ಸಂಪತ್ತು 8.67 ಲಕ್ಷ ಕೋಟಿ ರೂ.ನಷ್ಟು ಕಡಿಮೆಯಾಗಿದೆ.
ಜಾಗತಿಕ ವ್ಯಾಪಾರ ಒತ್ತಡಗಳು ಕಡಿಮೆಯಾಗಿ ಸುರಕ್ಷಿತ ಹೂಡಿಕೆ ಆಯ್ಕೆಯ ಬೇಡಿಕೆ ಇಳಿಮುಖವಾದ ಕಾರಣ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಎರಡನೇ ದಿನವೂ ಇಳಿದಿದೆ.
ಶೇ. 99.9 ಶುದ್ಧತೆಯ ಚಿನ್ನ ಗುರುವಾರ 10 ಗ್ರಾಂಗೆ 99,620 ರೂ. ಇದ್ದದ್ದು ಶುಕ್ರವಾರ 500 ರೂ. ಇಳಿಕೆಯಾಗಿ 99,120 ರೂ.ಗೆ ತಲುಪಿದೆ. 99,250 ರೂ. ಇದ್ದ ಶೇ. 99.5 ಶುದ್ಧತೆಯ ಚಿನ್ನ 98,750 ರೂ. ಆಗಿದೆ. ಬೆಳ್ಳಿ ಬೆಲೆ ಶುಕ್ರವಾರ ಕೆಜಿಗೆ 1,15,000 ರೂ.ಯಂತೆ ವ್ಯಾಪಾರವಾಯಿತು.