ಮೂರನೇ ದಿನ ಶೇ. 1ರಷ್ಟು ಕುಸಿದ ಷೇರುಪೇಟೆ

6-682cc69d1d4b6
Published on

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಸತತ ಮೂರನೇ ದಿನವೂ ಕುಸಿದಿದೆ. ಎಚ್​ಡಿಎಫ್​ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮುಂತಾದ ಬ್ಲ್ಯೂಚಿಪ್ ಕಂಪನಿಗಳ ಷೇರುಗಳನ್ನು ಲಾಭಕ್ಕಾಗಿ ಮಾರುವುದು ಮುಂದುವರಿದ ಪರಿಣಾಮ, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮಂಗಳವಾರ ಶೇಕಡ 1ರಷ್ಟು ಕೆಳಗಿಳಿದವು.

ಇಂದಿನ ಕುಸಿತದಿಂದಾಗಿ ಹೂಡಿಕೆದಾರರು ಸುಮಾರು 5.64 ಲಕ್ಷ ಕೋಟಿ ರೂ. ಕಳೆದುಕೊಂಡಂತಾಗಿದೆ. ದಿನದ ವಹಿವಾಟಿನ ಮಧ್ಯೆ 905 ಅಂಕ ಕುಸಿದು 81,153ಕ್ಕೆ ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 872 ಅಂಕ ಇಳಿಕೆ ದಾಖಲಿಸಿ 81,186ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್​ನ 30 ಕಂಪನಿಗಳ ಪೈಕಿ 27 ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದವು. ನಿಫ್ಟಿ ಕೂಡ 261 ಅಂಕ ಇಳಿದು 24,683ಕ್ಕೆ ಸ್ಥಿರವಾಯಿತು. ಎಟರ್ನಲ್ ಷೇರಿನ ಬೆಲೆ ಶೇ. 4.10ರಷ್ಟು ಕುಸಿಯಿತು. ಮಾರುತಿ, ಮಹಿಂದ್ರಾ ಆಂಡ್ ಮಹಿಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಪವರ್​ಗ್ರಿಡ್, ಬಜಾಜ್ ಫೈನಾನ್ಸ್, ಹಿಂದುಸ್ತಾನ್ ಯುನಿಲಿವರ್, ಏಷ್ಯನ್ ಪೇಂಟ್ಸ್ ಮುಂತಾದ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದವು. ಎಚ್​ಡಿಎಫ್​ಸಿ ಬ್ಯಾಂಕ್ ಷೇರಿನ ಬೆಲೆ ಶೇ.1.26ರಷ್ಟು ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಶೇ. 1.13ರಷ್ಟು ಇಳಿಯಿತು. ಟಾಟಾ ಸ್ಟೀಲ್, ಇನ್​ಫೋಸಿಸ್, ಐಟಿಸಿ ಷೇರುಗಳು ಮಾತ್ರ ಲಾಭ ಮಾಡಿದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 525 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಏಷ್ಯಾದ ಮಾರುಕಟ್ಟೆಗಳ ಪೈಕಿ ಜಪಾನ್, ಶಾಂಘೈ, ಹಾಂಗ್​ಕಾಂಗ್ ಸೂಚ್ಯಂಕಗಳು ಏರುಹಾದಿಯಲ್ಲಿದ್ದರೆ ದಕ್ಷಿಣ ಕೊರಿಯಾ ಇಳಿಕೆ ದಾಖಲಿಸಿತು. ಯೂರೋಪಿಯನ್ ಮಾರುಕಟ್ಟೆಗಳೂ ಏರಿಕೆ ಕಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net