

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರ ಹಾಗೂ ಅನುಸರಿಸುತ್ತಿರುವ ಜೀವನಪದ್ಧತಿಯೇ ಕಾರಣ ಎಂದು ವೈದ್ಯರು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಕಲಬೆರಕೆ ಆಹಾರ, ಕಳಪೆ ಆಹಾರ, ರಾಸಾಯನಿಕ ಆಹಾರ ಸೃಷ್ಟಿಸುತ್ತಿರುವ ಹಾನಿ ಅಷ್ಟಿಷ್ಟಲ್ಲ. ಅಕ್ಕಿ, ತೊಗರಿ ಬೇಳೆಯಲ್ಲೂ ರಾಸಾಯನಿಕ ಪತ್ತೆಯಾಗಿರುವುದು, ಇಡ್ಲಿ ತಯಾರಿಕೆ ಸಮಯದಲ್ಲಿ ಬಳಸುವ ಪ್ಲಾಸ್ಟಿಕ್ನಲ್ಲೂ ರಾಸಾಯನಿಕ ಅಂಶ ಸಿಕ್ಕಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಆಹಾರ ಸುರಕ್ಷತೆಯ ನಿಯಮಗಳನ್ನು, ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಿದೆ. ಆದರೆ, ಇಂಥ ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಿರುವುದು ಅತ್ಯಲ್ಪ. ಶುಚಿತ್ವವನ್ನು ಕಾಯ್ದುಕೊಳ್ಳಬೇಕಾದ ಮತ್ತು ಆಹಾರ ಉದ್ಯಮಕ್ಕೆ ಶಕ್ತಿ ತುಂಬಬೇಕಾದ ಹೋಟೆಲ್ಗಳೇ ಕಲಬೆರಕೆ ಆಹಾರದ ಮೂಲಕ ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವುದು ದುರಂತವೇ ಸರಿ.
ರುಚಿ ಹೆಚ್ಚಿಸಲು ನಿಷೇಧಿತ ಪದಾರ್ಥ ಬೆರೆಸಿ ಮಾರಾಟ, ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ಬಣ್ಣಗಳ ಬಳಕೆ, ಅಕ್ಕಿ, ಬೇಳೆ, ಮಸಾಲೆ ಪದಾರ್ಥಗಳಲ್ಲೂ ತೀವ್ರ ಕಲಬೆರಕೆ, ಕಾಳಸಂತೆ ಪಡಿತರ ಅಕ್ಕಿ ಖರೀದಿಸಿ, ಅದಕ್ಕೆ ಪಾಲಿಶ್ ಸ್ಪರ್ಶ ನೀಡುವುದು ಸೇರಿದಂತೆ ಹಲವು ಗಂಭೀರ ಪ್ರಕರಣಗಳು ಜನರ ಆತಂಕವನ್ನು ಹೆಚ್ಚಿಸಿವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಸಮಸ್ಯೆ ತೀವ್ರ ಪ್ರಮಾಣದಲ್ಲಿದೆ.
ಕಳಪೆ ಗುಣಮಟ್ಟದ ಆಹಾರ ಹಾಗೂ ಕಲಬೆರಕೆ ಆಹಾರ ಮಾರಾಟ ದೃಢಪಟ್ಟ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯನ್ವಯ 2024ರಿಂದ 2025ರ ಮಾರ್ಚ್ 25ರವರೆಗೆ 135 ಆಹಾರ ಮಾರಾಟ ಸಂಸ್ಥೆಗಳ ನೋಂದಣಿ ಹಾಗೂ ಪರವಾನಗಿಯನ್ನು ರಾಜ್ಯದಲ್ಲಿ ರದ್ದುಪಡಿಸಲಾಗಿದೆ. ಇದೇ ಅವಧಿಯಲ್ಲಿ ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಳಪೆ ಆಹಾರ ಮಾರಾಟದಲ್ಲಿ ಕರ್ನಾಟಕವೇ 2ನೇ ಸ್ಥಾನದಲ್ಲಿದೆ.
ತಿನ್ನುವ ಅನ್ನವೇ ವಿಷವಾಗಿ ಅಥವಾ ಅಪಾಯಕಾರಿಯಾಗಿ ಪರಿವರ್ತನೆಯಾದರೆ ಗತಿ ಏನು? ಆಹಾರ ಕಲಬೆರಕೆ ಎಂಬುದು ದೊಡ್ಡ ದುಷ್ಟಜಾಲವಾಗಿ ಬೆಳೆದಿದೆ. ಹಾಲಿಗೆ ನೀರು ಸೇರಿಸುವುದರಿಂದ ಹಿಡಿದು ಕಾಟನ್ ಕ್ಯಾಂಡಿ, ಗೋಬಿ, ಕಬಾಬ್ಗೆ ಕೃತಕ ಬಣ್ಣ ಬಳಕೆಯವರೆಗೆ ಈ ಕೃತ್ಯಗಳು ಗೋಚರಿಸುತ್ತಲೇ ಇವೆ. ಗುಣಮಟ್ಟದ ಆಹಾರ ಪೂರೈಕೆಯನ್ನು ಖಾತ್ರಿ ಪಡಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ರಾಜ್ಯದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಕೊರತೆ ಕಾಡುತ್ತಿದೆ. ನಿಯಮಿತ ತಪಾಸಣೆ ನಡೆಯುತ್ತಿಲ್ಲ.
ಕೆಲವೆಡೆ ದಂಡ ವಿಧಿಸಿ, ಪ್ರಕರಣ ಕೈಬಿಡಲಾಗಿರುವುದರಿಂದ, ಕಲಬೆರಕೆ ಆಹಾರ ಪೂರೈಕೆದಾರರಿಗೆ ಭಯವೇ ಇಲ್ಲದಂತಾಗಿದೆ. ಹೀಗಾಗಿ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006’ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಜನರೂ ಜಾಗೃತರಾಗಬೇಕು. ಕಳಪೆ ಅಥವಾ ಕಲಬೆರಕೆಯುಕ್ತ ಆಹಾರ, ಆಶುಚಿಯ ವಾತಾವರಣ ಕಂಡುಬಂದಲ್ಲಿ ಸಹಾಯವಾಣಿಗೆ (1800112100) ದೂರು ನೀಡಬೇಕು. ಸರ್ಕಾರವೂ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು.