

ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ 3 ದಿನಗಳಿಂದ ‘ಜನಾಶೀರ್ವಾದ ಯಾತ್ರೆ’ ಮೂಲಕ ರಾಜ್ಯ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ನಿತ್ಯವೂ ನೂರಾರು ಕಿಮೀ ಪ್ರಯಾಣ ನಡೆಸುವುದರ ಜತೆಗೆ ರೋಡ್ ಶೋ, ವೇದಿಕೆ ಕಾರ್ಯಕ್ರಮ, ಸಂವಾದ ಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲೇ, ಮೋದಿ ಸರ್ಕಾರದ ಸಾಧನೆಗಳು ಹಾಗೂ ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
# ಮೋದಿ ಸಂಪುಟದ ಯುವ ಟೀಮ್ ಕಂಡು ಕಾಂಗ್ರೆಸ್ ಬೆದರಿದೆಯೇ?
ಹೌದು. ಕಾಂಗ್ರೆಸಿಗರು ಭಯಭೀತರಾಗಿದ್ದಾರೆ. ದಲಿತ, ಹಿಂದುಳಿದವರು ಸೇರಿ ಎಲ್ಲ್ಲ ಜಾತಿ, ವರ್ಗದವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಅಹಿಂದ ಹೆಸರಿನಲ್ಲಿ ಸುದೀರ್ಘ ಅವಧಿ ರಾಜಕೀಯ ಮಾಡಿದ ಕಾಂಗ್ರೆಸಿಗರು, ಆ ವರ್ಗವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಅಧಿಕಾರಕ್ಕೇರಿದಾಗೆಲ್ಲ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಅವರ ನಿಜಬಣ್ಣ ದೇಶದ ಜನ ಅರಿತಿದ್ದಾರೆ. ಇನ್ಮುಂದೆ ಅವರ ಜಾತಿ ಹೆಸರಿನ ಮೋಸದ ರಾಜಕೀಯದಾಟ ನಡೆಯಲ್ಲ.
# ಕೋವಿಡ್ 3ನೇ ಅಲೆ ಭೀತಿಯಲ್ಲಿ ಯಾತ್ರೆ ಅಗತ್ಯವಿತ್ತಾ?
ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸದ್ಯ ಕೋವಿಡ್ ಸಹಜ ಸ್ಥಿತಿಗೆ ಬಂದಿದೆ. ಆದರೆ ಅಪಾಯ ಇನ್ನೂ ಹೋಗಿಲ್ಲ ಎಂಬುದು ನಮಗೂ ಗೊತ್ತಿದೆ. ಸರ್ಕಾರದ ಮಾರ್ಗಸೂಚಿ ಪಾಲನೆಯೊಂದಿಗೆ ಯಾತ್ರೆ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಕಾಂಗ್ರೆಸಿಗರು ಯಾತ್ರೆಗೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
# ಕ. ಕರ್ನಾಟಕ ಅಭಿವೃದ್ಧಿಗೆ ನಿಮ್ಮ ವಿಷನ್ ಏನು?
ಜಿಲ್ಲೆಗೆ ಮೊದಲ ಬಾರಿ ನನ್ನ ಮೂಲಕ ಸಂಪುಟದಲ್ಲಿ ಅವಕಾಶ ಸಿಕ್ಕಿರುವುದು ಸೌಭಾಗ್ಯವೇ ಸರಿ. ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನನ್ನ ಆದ್ಯತೆಯಲ್ಲಿ ಸೇರಿದೆ. ಈ ಭಾಗಕ್ಕೆ ಸೋಲಾರ್ ಪಾರ್ಕ್ ಸೇರಿ ವಿಶೇಷ ಯೋಜನೆ ತರಲು ಉದ್ದೇಶಿಸಿರುವೆ. ರಾಜ್ಯ ಸರ್ಕಾರದ ಸಹಯೋಗದಿಂದ ಪ್ರಗತಿಗೆ ಹೊಸ ಆಯಾಮ ನೀಡಲು ಶಕ್ತಿಮೀರಿ ದುಡಿಯುವೆ.