

ಮೈಸೂರು: ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳು ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದು, ಸಮಸ್ಯೆಗಳನ್ನು ಸರ್ಕಾರ ಆದ್ಯತೆ ಮೇಲೆ ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಹೇಳಿದರು.
ನಗರದ ಕ್ರಾಫರ್ಡ್ ಭವನ ಆವರಣದಲ್ಲಿ ಬುಧವಾರ ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಉದ್ಯೋಗಿಗಳ ಒಕ್ಕೂಟದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಹೊಸದಾಗಿ 8 ವಿಶ್ವ ವಿದ್ಯಾಲಯಗಳನ್ನು ತೆರೆದಿದ್ದು, ಆ ವಿಶ್ವ ವಿದ್ಯಾಲಯಗಳು ಸಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.
ಮೈಸೂರು ವಿಶ್ವ ವಿದ್ಯಾಲಯದ ನಿವೃತ್ತ ನೌಕರರು ಸಂಘ ರಚಿಸಿಕೊಂಡಿರುವುದು ಸಂತಸದ ವಿಚಾರ. ಈ ಸಂಘ ಕೇವಲ ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ವೇದಿಕೆಯಾಗಬಾರದು. ಇದರ ಜತೆಗೆ ವಿಶ್ವ ವಿದ್ಯಾಲಯ ಉತ್ತಮವಾಗಿ ಮುನ್ನಡೆಯಲು ನಿವೃತ್ತ ಉದ್ಯೋಗಿಗಳು ಮಾರ್ಗದರ್ಶನ ನೀಡಬೇಕು. ವಿಶ್ವ ವಿದ್ಯಾಲಯ ಸಹ ನಿವೃತ್ತ ಉದ್ಯೋಗಿಗಳ ಮಾರ್ಗದರ್ಶನ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ರಾಜ್ಯದ 32 ವಿಶ್ವ ವಿದ್ಯಾಲಯಗಳ ಪೈಕಿ 17 ವಿಶ್ವ ವಿದ್ಯಾಲಯಗಳು ಮಾತ್ರ ನ್ಯಾಕ್ ಮಾನ್ಯತೆ ಪಡೆಯುವ ಪ್ರಯತ್ನ ನಡೆಸಿತು. ದೇಶದಲ್ಲಿ 1,160 ವಿಶ್ವ ವಿದ್ಯಾಲಯಗಳು ಇದ್ದು, ಈ ಪೈಕಿ 462 ವಿಶ್ವ ವಿದ್ಯಾಲಯಗಳು ಮಾತ್ರ ನ್ಯಾಕ್ ಮಾನ್ಯತೆ ಪಡೆದಿದೆ. ಉಳಿದ ವಿಶ್ವ ವಿದ್ಯಾಲಯಗಳ ಮೌಲ್ಯ ಮಾಪನವೇ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮೈಸೂರು ವಿಶ್ವ ವಿದ್ಯಾಲಯ ಕುಲಸಚಿವೆ ವಿ.ಆರ್. ಶೈಲಜಾ, ಸಿಂಡಿಕೇಟ್ ಸದಸ್ಯರಾದ ಡಾ.ಜೆ. ಶಿಲ್ಪಾ, ಮಹದೇಶು, ಒಕ್ಕೂಟದ ಅಧ್ಯಕ್ಷ ಡಾ.ಕೆ. ಮಹದೇವ್ ಇದ್ದರು.