

ಸೊರಬ: ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನದ ಅಭಿವೃದ್ಧಿಗೆ ಎದುರಾಗಿರುವ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿ, ಭಕ್ತರಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶ್ರೀ ರೇಣುಕಾಂಬ ಕಲ್ಯಾಣ ಮಂದಿರದಲ್ಲಿ ಗುರುವಾರ ದಸರಾ ಉತ್ಸವ ಸಮಿತಿ, ರೇಣುಕಾಂಬಾ ಗ್ರಾಮೀಣ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಪಂ ಸಹಯೋಗದಲ್ಲಿ ಆಯೋಜಿಸಿರುವ 9ನೇ ವರ್ಷದ ಶ್ರೀ ರೇಣುಕಾಂಬಾ ದೇವಿಯ ದಸರಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನವು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಮುಜರಾಯಿ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ. ದೇವಸ್ಥಾನದ ಸುತ್ತ ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಿದೆ. ಇದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹಿನ್ನಡೆಯಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಿಸಿ ಇರುವ ತಾಂತ್ರಿಕ ಸಮಸ್ಯೆಗಳ ಬಗೆಹರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಪ್ರಸಾದ್, ದಸರಾ ಉತ್ಸವ ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಗ್ರಾಪಂ ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ಸದಸ್ಯ ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯರಾದ ಎನ್.ಜಿ. ನಾಗರಾಜ್, ಸುನೀಲ್ ಗೌಡ, ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಪ್ರಜ್ವಲ್, ಸಮಿತಿಯ ವಸಂತ ಶೇಟ್, ಪ್ರಮುಖರಾದ ಜಯಶೀಲಗೌಡ, ಸುಧಾಕರ ನಾಯ್ಕ, ಮಂಜುನಾಥ ಶಣೈ ಇತರರಿದ್ದರು.