

ಸೋಮವಾರಪೇಟೆ : ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವುದು ಮತ್ಸೃ ಸಂಜೀವಿನಿ ಯೋಜನೆ ಉದ್ದೇಶ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್(ಎನ್‌ಆರ್‌ಎಲ್‌ಎಂ)ಯೋಜನೆಯಡಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಲ್ಲಳ್ಳಿ ಜಲಪಾತದ ಸಮೀಪ ನಿರ್ಮಾಣವಾಗಿರುವ ಮತ್ಸ್ಯ ಸಂಜೀವಿನಿ ಫಿಶ್ ಕ್ಯಾಂಟಿನ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಂಜೀವಿನಿ ಒಕ್ಕೂಟದ ಸಂಘದ ಮೂಲಕವೇ ಕ್ಯಾಂಟಿನ್ ನಡೆಯಲಿದೆ. ಪ್ರವಾಸಿಗರಿಗೆ ರುಚಿಯಾದ, ಗುಣಮಟ್ಟದ ಆಹಾರ ಕಲ್ಪಿಸುವುದು ಸ್ವಸಹಾಯ ಸಂಘದವರ ಜವಾಬ್ದಾರಿಯಾಗಿದೆ. ಮೀನುಗಾರಿಕೆ ಇಲಾಖೆ ವತಿಯಿಂದ ಹಾರಂಗಿ ಹಿನ್ನೀರಿನಲ್ಲಿ ಬೆಳೆದಿರುವ ತಾಜಾ ಮೀನನ್ನು ಕಡಿಮೆ ದರದಲ್ಲಿ ನೀಡಲಾಗುತ್ತದೆ. ಅದರ ಜತೆಯಲ್ಲಿ ಕೋಳಿ ಮಾಂಸಾಹಾರವನ್ನು ಮಾರಲು ಅವಕಾಶವಿದೆ ಎಂದು ಹೇಳಿದರು. ಜಲಪಾತಕ್ಕೆ ಬಂದ ಪ್ರವಾಸಿಗರಿಗೆ ಇಲ್ಲಿ ಊಟ ಸಿಗುತ್ತಿರಲಿಲ್ಲ. ಇನ್ನು ಸಮಸ್ಯೆಯಾಗುವುದಿಲ್ಲ. ಪ್ರವಾಸಿಗರೊಂದಿಗೆ ಆತ್ಮೀಯತೆಯಿಂದ ಮಾತನಾಡಬೇಕು ಎಂದು ಹೇಳಿದರು.
ಸೋಮವಾರಪೇಟೆ ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾಗಿದೆ. ಅದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗುವುದು. ಪ್ರವಾಸೋದ್ಯಮ ಬೆಳೆದರೆ ಗ್ರಾಮೀಣ ಜನರಿಗೂ ಉಪಯೋಗವಾಗಲಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಮಾತನಾಡಿ, ಶಾಸಕರ ಪ್ರಯತ್ನದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಮಲ್ಲಳ್ಳಿ ಜಲಪಾತದ ಸಮೀಪ ಫಿಶ್ ಕ್ಯಾಂಟಿನ್ ಉದ್ಘಾಟನೆಗೊಂಡಿದೆ. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಿಕೊಟ್ಟಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಇದೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಬಹುದು ಎಂದು ಹೇಳಿದರು.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಿ.ತಮ್ಮಯ್ಯ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಾವೇರಮ್ಮ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಪಂಚಾಯಿತಿ ಪಿಡಿಒ ರವಿ ನಾಯರ್ ಪ್ರಮುಖರಾದ ಬಿ.ಬಿ.ಸತೀಶ್, ನಾಪಂಡ ಮುತ್ತಪ್ಪ, ಎಚ್.ಆರ್.ಸುರೇಶ್, ಕಿರಣ್ ಉದಯ್‌ಶಂಕರ್, ಚೇತನ್ ಮತ್ತಿತರರು ಇದ್ದರು.