ಹೆಜ್ಜೆಗುರುತು-2: ಸ್ವಾತಂತ್ರ್ಯದ ಅಮೃತ ಮಹೋತ್ಸವ..

Hegge Guruthu
Published on
ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಸ್ವತಂತ್ರ ಭಾರತದ 75 ಪ್ರಮುಖ ಸಾಧನೆಗಳು ಹಾಗೂ ಘಟನೆಗಳನ್ನು ಇಲ್ಲಿ ನೀಡಲಾಗುತ್ತದೆ.
  • 1961ರಲ್ಲಿ ಭಾರತದಲ್ಲಿ ಹಸಿರು ಕ್ರಾಂತಿಯ ಯುಗ ಆರಂಭ. ಬರಗಾಲ ತಲೆದೋರಿದ ಹಿನ್ನೆಲೆಯಲ್ಲಿ ಹಸಿರು ಕ್ರಾಂತಿಯ ಪಿತಾಮಹ ನಾರ್ಮನ್ ಬಾರ್ಗಲ್ ಅವರನ್ನು ಭಾರತಕ್ಕೆ ಕರೆಸಲಾಯಿತು. ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದೇ ಗುರುತಿಸಲಾಗುವ ಎಂ.ಎಸ್.ಸ್ವಾಮಿನಾಥನ್ ಜತೆ ಸೇರಿ ಇವರು ಅಧಿಕ ಇಳುವರಿಯ ತಳಿ, ರಸಗೊಬ್ಬರ, ಕೀಟನಾಶಕ ಬಳಸಿ ಕೃಷಿ ಉತ್ಪಾದನೆ ಹೆಚ್ಚಿಸಿದರು.
  • 1961ರಲ್ಲಿ ಗೋವಾ, ದಾಮನ್ ಮತ್ತು ದಿಯು ಪ್ರದೇಶಗಳನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತ ಗೊಳಿಸಿ ಭಾರತದ ಸ್ವಾಧೀನಕ್ಕೆ ತೆಗೆದುಕೊಳ್ಳಲಾಯಿತು.
  • 1962ರ ಅಕ್ಟೋಬರ್, ನವೆಂಬರ್​ನಲ್ಲಿ ಭಾರತ - ಚೀನಾ ಯುದ್ಧ. ಹಿಮಾಲಯ ಪ್ರದೇಶದಲ್ಲಿ ಗಡಿ ಸಮಸ್ಯೆ ಕಾರಣ. ನವೆಂಬರ್ 20ರಂದು ಯುದ್ಧ ಮುಕ್ತಾಯ.
  • 1963ರ ನವೆಂಬರ್ 21ರಂದು ಕೇರಳದ ತುಂಬಾ ಕೇಂದ್ರದಿಂದ ಮೊದಲ ರಾಕೆಟ್ ಉಡಾವಣೆ ಮೂಲಕ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮುನ್ನುಡಿ.
  • 1964ರಲ್ಲಿ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ.
  • 1965ರ ಏಪ್ರಿಲ್-ಸೆಪ್ಟೆಂಬರ್​ನಲ್ಲಿ ಭಾರತ-ಪಾಕಿಸ್ತಾನ ಯುದ್ಧ. ಜಮ್ಮು ಮತ್ತು ಕಾಶ್ಮೀರದ ಜಿಬ್ರಾಲ್ಟರ್​ನಲ್ಲಿ ಪಾಕ್ ದಾಳಿ. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ಕದನ ವಿರಾಮ.
  • 1966ರ ಜನವರಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ನಿಧನದ ನಂತರ ಇಂದಿರಾ ಗಾಂಧಿ ಮೊದಲ ಮಹಿಳಾ ಪ್ರಧಾನಿ.
  • 1969ರಲ್ಲಿ ಇಸ್ರೋ ಸ್ಥಾಪನೆ. ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯನ್ನು ಪ್ರೋತ್ಸಾಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶ.
  • 1969 ಜುಲೈ 19ರಂದು ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರದಿಂದ 14 ಖಾಸಗಿ ಬ್ಯಾಂಕ್​ಗಳ ರಾಷ್ಟ್ರೀಕರಣ. ಕೃಷಿ ವಲಯಕ್ಕೆ ಹೆಚ್ಚಿನ ಸಾಲ ಒದಗಿಸುವ ಉದ್ದೇಶ. 1980ರ ಏಪ್ರಿಲ್​ನಲ್ಲಿ ಎರಡನೇ ಬಾರಿಗೆ ಮತ್ತೆ ಕೆಲ ಬ್ಯಾಂಕ್​ಗಳ ರಾಷ್ಟ್ರೀಕರಣ.
  • 1970ರ ಜ. 13ರಂದು ಡೇರಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಶ್ವೇತ (ಕ್ಷೀರ) ಕ್ರಾಂತಿಗೆ ಮುನ್ನುಡಿ.
  • 1970ರ ದಶಕದಲ್ಲಿ ಮನುಷ್ಯರ ಡಿಎನ್​ಎ ಮಾದರಿ ಇಟ್ಟುಕೊಂಡು ಅವರನ್ನು ಗುರುತಿಸುವ ವಿಜ್ಞಾನ- ತಂತ್ರಜ್ಞಾನ ವನ್ನು ಭಾರತದ ಡಾ.ಲಾಲ್ಜಿ ಸಿಂಗ್ ಅಭಿವೃದ್ಧಿಪಡಿಸಿದರು.
  • 1971ರಲ್ಲಿ ಮತ್ತೆ ಭಾರತ- ಪಾಕಿಸ್ತಾನ ಯುದ್ಧ. ಬಾಂಗ್ಲಾ ವಿಮೋಚನೆಗಾಗಿ ಪೂರ್ವ ಪಾಕಿಸ್ತಾನದಲ್ಲಿ 1971ರ ಡಿ. 3ರಿಂದ ಡಿ. 16ರವರೆಗೆ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲು. ಪ್ರತ್ಯೇಕ ರಾಷ್ಟ್ರವಾಗಿ ಬಾಂಗ್ಲಾ ಉದಯ.
  • 1972ರ ಜುಲೈ 2ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಶಿಮ್ಲಾ ಒಪ್ಪಂದಕ್ಕೆ ಸಹಿ. ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತರೀತಿಯಲ್ಲಿ ಇತ್ಯರ್ಥಪಡಿಸಿಕೊಳ್ಳುವ ಉದ್ದೇಶ.
  • 1973ರ ಏಪ್ರಿಲ್​ನಲ್ಲಿ ಅರಣ್ಯ ಸಂರಕ್ಷಣೆಗಾಗಿ ಚಿಪ್ಕೊ ಚಳವಳಿ. ಉತ್ತರಾಖಂಡದ ಚಮೊಲಿ ಜಿಲ್ಲೆಯ ರೆನಿ ಗ್ರಾಮದಲ್ಲಿ ಆರಂಭ.
  • 1974ರ ಮೇ 18ರಂದು ದೇಶದ ಮೊದಲ ಅಣ್ವಸ್ತ್ರ ಪರೀಕ್ಷೆ ರಾಜಸ್ಥಾನದ ಪೋಖ್ರಾನ್​ನಲ್ಲಿ ನಡೆಯಿತು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ 5 ಕಾಯಂ ರಾಷ್ಟ್ರಗಳ ಹೊರತಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಮೊದಲ ದೇಶ ಭಾರತವಾಗಿತ್ತು.
  • 1975 ಏಪ್ರಿಲ್ 19ರಂದು ಭಾರತದ ಚೊಚ್ಚಲ ಉಪಗ್ರಹ ‘ಆರ್ಯಭಟ’ ಉಡಾವಣೆಯಾಯಿತು.
  • 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ತುರ್ತು ಪರಿಸ್ಥಿತಿ ಹೇರಿಕೆ. 1977ರ ಮಾರ್ಚ್ 21ರವರೆಗೆ 25 ತಿಂಗಳು ಇದ್ದ ತುರ್ತು ಪರಿಸ್ಥಿತಿಯಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸಲಾಗಿತ್ತು.
  • 1975ರ ಆಗಸ್ಟ್ 1ರಂದು ಸ್ಯಾಟಲೈಟ್ ಇನ್​ಸ್ಟ್ರಕ್ಷನಲ್ ಟೆಲಿವಿಷನ್ ಎಕ್ಸ್ ಪರಿಮೆಂಟ್ (ಎಸ್​ಐಟಿಇ) ಶುರುವಾಯಿತು. ಮೊದಲ ಬಾರಿಗೆ 2,400 ಕಪು್ಪ-ಬಿಳುಪು ಟಿವಿ ಸೆಟ್​ಗಳು ಹಲವು ಗ್ರಾಮಗಳಲ್ಲಿ ಬೆಳಗಿದವು. ಅಮೆರಿಕದ ನಾಸಾದ ಸಹಯೋಗದಲ್ಲಿ ಇಸ್ರೋ ಈ ಪ್ರಯೋಗ ನಡೆಸಿತು.
  • 1977ರ ಮಾರ್ಚ್ 24ರಂದು ಮೊಟ್ಟಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಆಯ್ಕೆ. ತುರ್ತು ಪರಿಸ್ಥಿತಿ ವಿರೋಧಿಸಿದ ಪಕ್ಷಗಳಿಗೆ ಕಾಂಗ್ರೆಸ್ ವಿರುದ್ಧ ಚುನಾವಣೆಯಲ್ಲಿ ಗೆಲುವು.

(ಮುಂದುವರಿಯುವುದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net