ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು: ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

arrest
Published on

ಬೆಂಗಳೂರು: ಜುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಮುಬಾರಕ್(೨೮) ಮತ್ತು ಅಸ್ಗರ್(೩೦) ಬಂಧಿತರು. ಆರೋಪಿಗಳಿಂದ ೩.೬೦ ಲಕ್ಷ ರೂ. ಮೌಲ್ಯದ ೬೦ ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಹೊಸಕೆರೆಹಳ್ಳಿ ಮುಖ್ಯರಸ್ತೆಯ ಕೃಷ್ಣ ಬ್ಯಾಂಕರ್ಸ್ ಆ್ಯಂಡ್ ಜುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಸಿಬ್ಬಂದಿ ೬೦ ಗ್ರಾಂ ತೂಕದ ಚಿನ್ನದ ಉಂಗುರಗಳನ್ನು ಕಳ್ಳನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಅಂಗಡಿ ಮಾಲೀಕ ಓಮಾರಾಮ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾ.೪ರಂದು ಸಂಜೆ ೪.೪೦ರ ವೇಳೆ ಕೃಷ್ಣ ಬ್ಯಾಂಕರ್ಸ್ ಆ್ಯಂಡ್ ಜುವೆಲ್ಲರಿ ಅಂಗಡಿಗೆ ಇಬ್ಬರು ಅಪರಿಚಿತರು ಅಂಗಡಿಗೆ ಬಂದಿದ್ದು, ಚಿನ್ನದ ಉಂಗುರು ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಓಂ ಪ್ರಕಾಶ್ ಎಂಬ ಸಿಬ್ಬಂದಿ ವಿವಿಧ ವಿನ್ಯಾಸ ಚಿನ್ನದ ಉಂಗುರಗಳನ್ನು ತೋರಿಸಿದ್ದಾರೆ. ಆದರೂ ಮತ್ತಷ್ಟು ಬೇರೆ ವಿನ್ಯಾಸದ ಉಂಗುರಗಳನ್ನು ತೋರಿಸುವಂತೆ ಕೇಳಿದ್ದಾರೆ. ಇದೇ ಸಮಯಕ್ಕೆ ಇಬ್ಬರು ಮಹಿಳಾ ಗ್ರಾಹಕರು ಅಂಗಡಿಗೆ ಬಂದು ಕಿವಿಯೋಲೆ ತೋರಿಸುವಂತೆ ಓಂ ಪ್ರಕಾಶ್ ಅವರನ್ನು ಕೇಳಿದ್ದಾರೆ. ಆಗ ಓಂ ಪ್ರಕಾಶ್, ಚಿನ್ನದೊಲೆಗಳಿದ್ದ ಬಾಕ್ಸ್ ತೆಗೆದು ಆ ಮಹಿಳೆಯರಿಗೆ ತೋರಿಸುವಲ್ಲಿ ನಿರತರಾಗಿದ್ದಾರೆ. ಇದೇ ಸಮಯದಲ್ಲಿ ಆರೋಪಿಗಳು ೩.೬೦ ಲಕ್ಷ ರೂ. ಮೌಲ್ಯದ ಚಿನ್ನದ ೬೦ ಗ್ರಾಂ ತೂಕದ ಉಂಗುರಗಳನ್ನು ಕದ್ದು ಪರಾರಿಯಾಗಿದ್ದಾರೆ.

ಸಂಜೆ ೬ ಗಂಟೆಗೆ ಮಾಲೀಕ ಓಮಾರಾಮ್ ಜುವೆಲರಿ ಅಂಗಡಿಗೆ ಬಂದಿದ್ದಾರೆ. ಈ ವೇಳೆ ಗ್ರಾಹಕರೊಬ್ಬರು ಬಂದು ಉಂಗುರು ತೋರಿಸುವಂತೆ ಕೇಳಿದ್ದಾರೆ. ಆಗ ಉಂಗುರಗಳು ಇದ್ದ ಬಾಕ್ಸ್ ತೆಗೆದುಕೊಳ್ಳಲು ಡ್ರಾಯರ್ ತೆರೆದಾಗ ಬಾಕ್ಸ್ ಇಲ್ಲದಿರುವುದು ಕಂಡು ಬಂದಿದೆ. ಈ ಬಗ್ಗೆ ಸಿಬ್ಬಂದಿ ಓಂ ಪ್ರಕಾಶ್‌ನನ್ನು ಕೇಳಿದಾಗ ಅಲ್ಲೇ ಇರುವುದಾಗಿ ಹುಡುಕಿದ್ದಾನೆ. ಆದರೆ, ಅಲ್ಲಿಯೂ ಬಾಕ್ಸ್ ಕಂಡು ಬಂದಿಲ್ಲ. ಈ ವೇಳೆ ಅಂಗಡಿಯ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಬಾಕ್ಸ್ ಸಹಿತ ಚಿನ್ನದ ಉಂಗುರಗಳನ್ನು ಕದ್ದು ಪರಾರಿಯಾಗಿರುವುದು ಕಂಡು ಬಂದಿದೆ. ಬಳಿಕ ಓಮಾರಾಮ್ ಅವರು ಗಿರಿನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಕಳ್ಳತನ ಪ್ರಕರಣ ಪತ್ತೆ:
ಆರೋಪಿಗಳಿಬ್ಬರು ತಮಿಳುನಾಡಿನಿಂದ ದ್ವಿಚಕ್ರ ವಾಹನದಲ್ಲಿ ನಗರಕ್ಕೆ ಬಂದು ಜುವೆಲ್ಲರಿ ಅಂಗಡಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಚಿನ್ನದ ಉಂಗುರ ಕದ್ದು ಪರಾರಿಯಾಗಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ದ್ವಿಚಕ್ರ ವಾಹನದ ಸುಳಿವು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಗಿರಿನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net