ಸಿಟಿಯಲ್ಲಿ ಚಿನ್ನ ಕದ್ದು ಕಾಡಿನಲ್ಲಿ ವಾಸ!

arrest (3)
Published on

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಬೀಗ ಮುರಿದು ಚಿನ್ನಾಭರಣ ಕದ್ದು, ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ರೌಡಿಶೀಟರ್ ಸೇರಿ ಇಬ್ಬರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಸಪ್ತಗಿರಿ ಲೇಔಟ್ ನಿವಾಸಿ ನರಸಿಂಹ ರೆಡ್ಡಿ (36) ಮತ್ತು ತಮಿಳುನಾಡಿನ ಹೊಸೂರು ನಿವಾಸಿ ವಿನು ಚಕ್ರವರ್ತಿ (36) ಬಂಧಿತರು. ಇವರಿಂದ 81.25 ಲಕ್ಷ ರೂ. ಮೌಲ್ಯದ 1 ಕೆ.ಜಿ. 141 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 10ರಂದು ಬನಶಂಕರಿ 3ನೇ ಹಂತದ ನಿವಾಸಿ ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ತೆರಳಿದ್ದರು. ಆ ವೇಳೆ ದುಷ್ಕರ್ಮಿಗಳು ಬೀಗ ಮುರಿದು ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ಸೇರಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಯು. ಸತೀಶ್‌ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ನೆಲಮಂಗಲದ ಸೋಲೂರು ಮೂಲದ ನರಸಿಂಹರೆಡ್ಡಿ, ಗಿರಿನಗರ ಠಾಣೆ ರೌಡಿಶೀಟರ್. ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 49 ಪ್ರಕರಣಗಳು ದಾಖಲಾಗಿವೆ. ಜಾಮೀನು ಪಡೆದು ಬಿಡುಗಡೆಯಾಗಿದ್ದ ರೆಡ್ಡಿ, ಹಳೇ ಚಾಳಿ ಮುಂದುವರಿಸಿದ್ದ.

ಮತ್ತೊಬ್ಬ ಆರೋಪಿ ವಿನು ಚಕ್ರವರ್ತಿ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ನರಸಿಂಹ ರೆಡ್ಡಿಯ ಸ್ನೇಹಿತನಾಗಿದ್ದು, ಕದ್ದ ವಸ್ತುಗಳನ್ನು ವಿಲೇವಾರಿ ಮಾಡುತ್ತಿದ್ದ. ಈತನ ವಿರುದ್ಧವೂ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಆರು ಅಪರಾಧ ಪ್ರಕರಣಗಳು ದಾಖಲಾಗಿವೆ.

ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ, ರಂಗೋಲಿ ಬಿಡಿಸದ ಮನೆಗಳನ್ನು ನರಸಿಂಹ ರೆಡ್ಡಿ ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು, ನಗದು ಕಳವು ಮಾಡುತ್ತಿದ್ದ.

ಕದ್ದ ವಸ್ತುಗಳನ್ನು ಮನೆ ಸಮೀಪದ ಚರಂಡಿಗಳು ಮತ್ತು ಕುಣಿಗಲ್- ಹಾಸನ ಮುಖ್ಯರಸ್ತೆಯ ಅಗ್ರೋ ಪ್ರೈವೇಟ್ ಲಿ. ಹಿಂಭಾಗದ ಕಲ್ಲು ಬಂಡೆ ಬಳಿ ಬಚ್ಚಿಟ್ಟಿದ್ದ. ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಮತ್ತು ಕೃಷ್ಣಗಿರಿಯ ಅರಣ್ಯ ಪ್ರದೇಶದಲ್ಲಿ ರಾತ್ರಿ ಮಲಗುತ್ತಿದ್ದ. ಅಗತ್ಯ ಇದ್ದಾಗ ಸ್ವಲ್ಪ ಸ್ವಲ್ಪ ಚಿನ್ನ ತೆಗೆದುಕೊಂಡು ಸ್ನೇಹಿತ ವಿನು ಚಕ್ರವರ್ತಿ ಸೇರಿ ಕೆಲ ಪರಿಚಿತರ ಮುಖಾಂತರ ವಿಲೇವಾರಿ ಮಾಡುತ್ತಿದ್ದ.ಆರೋಪಿಯ ಬಂಧನದಿಂದ ಗಿರಿನಗರ, ಬಸವನಗುಡಿ, ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net