

ಬೆಂಗಳೂರು: ‘ನಾನು ಮಾರ್ಚ್ ತಿಂಗಳಿಂದ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತೇನೆ, ಕಾರ್ಯಕರ್ತರ ಮನೆಗಳಲ್ಲಿಯೇ ವಾಸ್ತವ್ಯ(Staying at activist's house since March) ಹೂಡಿ ಪಕ್ಷ ಕಟ್ಟುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(H.D.Devegowda) ಹೇಳಿದರು.
ಜೆ.ಪಿ.ಭವನದಲ್ಲಿ ಜೆಡಿಎಸ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದು ಸಮರ್ಥ ನಾಯಕರು, ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷವನ್ನು ಬೇರೆಯವರು ಮುಗಿಸುವುದು ಅಸಾಧ್ಯ. ಸದಸ್ಯತ್ವ ಅಭಿಯಾನವನ್ನು ನೀವು ಮುಂದುವರಿಸಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ನ್ನು ಮುಗಿಸಬೇಕೆಂದು ಹೊಂಚು ಹಾಕುತ್ತಿದೆ. ಯಾವುದೇ ಕಾರಣಕ್ಕೂ ಆ ಕನಸು ಈಡೇರುವುದಿಲ್ಲ ಎಂದು ಗುಡುಗಿದರು.
ಕುಮಾರಸ್ವಾಮಿ ಅವರನ್ನು ಮುಗಿಸಿದರೆ ಜೆಡಿಎಸ್ ಮುಗಿದು ಹೋಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಅದಕ್ಕೆ ಕಾರಣ ಇಷ್ಟೇ, ಕುಮಾರಸ್ವಾಮಿ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರು ಬಲಿಷ್ಠವಾಗಿ ನಿಂತಿದ್ದಾರೆ. ಹೀಗಾಗಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ ಮಾತು ಎಂದರು.
ಜೆಡಿಎಸ್ ಕುಟುಂಬ ಆಧಾರಿತ ಪಕ್ಷ ಎಂದು ಕಾಂಗ್ರೆಸ್ ಹೇಳುತ್ತದೆ. ಯಾರಾದರೂ ಒಮ್ಮೆ ಕಾಂಗ್ರೆಸ್ ಕಚೇರಿಗೆ ಹೋಗಿ ಅಲ್ಲಿ ಗೋಡೆಗಳ ಮೇಲೆ ನೇತು ಹಾಕಿರುವ ಫೋಟೋಗಳನ್ನು ಒಮ್ಮೆ ನೋಡಿ. ಕುಟುಂಬ ಆಧಾರಿತ ಪಾರ್ಟಿ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳುವುದು ಬೇಡ. ಎಲ್ಲಾರೂ ಒಟ್ಟಾಗಿ ಪಕ್ಷ ವಹಿಸುವ ಕೆಲಸ ಮಾಡೋಣ ಎಂದು ಹೇಳಿದರು.