ಜೀವನಾಂಶ ಕೊಡುವವರೆಗೆ ವಿಚಾರಣೆಗೆ ತಡೆ: ಹೈಕೋರ್ಟ್ ಮಹತ್ವದ ಆದೇಶ

highcourt
Published on

ಬೆಂಗಳೂರು: ಪತ್ನಿಗೆ ಮಧ್ಯಂತರ ಜೀವನಾಂಶ ಪಾವತಿಸುವವರೆಗೂ ಪತಿ ದಾಖಲಿಸಿರುವ ವಿಚ್ಛೇದನ ಅರ್ಜಿ ಕುರಿತ ವಿಚಾರಣೆಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಬಹುದು ಎಂದು ಹೈಕೋರ್ಟ್ ಹೇಳಿದೆ.

ಮಧ್ಯಂತರ ಜೀವನಾಂಶದ ಹಿಂಬಾಕಿ ಪಾವತಿಸದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ಪತಿ ಸಲ್ಲಿಸಿರುವ ಅರ್ಜಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚ್ಛೇದನ ಕೋರಿದ ಅರ್ಜಿಗಳಲ್ಲಿ ಪತ್ನಿಗೆ ಮಧ್ಯಂತರ ಜೀವನಾಂಶ ಪಾವತಿಸುವಂತೆ ಹೊರಡಿಸಿದ ನ್ಯಾಯಾಲಯದ ಆದೇಶವನ್ನು ಪಾಲಿಸದ ಹಲವು ಪ್ರಕರಣಗಳು ಹೈಕೋರ್ಟ್ ಗಮನಕ್ಕೆ ಬರುತ್ತಿವೆ. ಆದರೂ ವಿಚ್ಛೇದನದ ಮುಖ್ಯ ಅರ್ಜಿ ವಿಚಾರಣೆ ಮುಂದುವರಿಸಲು ಕೋರುತ್ತಾರೆ. ಆದರೆ, ಮಧ್ಯಂತರ ಜೀವನಾಂಶ ಪಾವತಿ ಮಾಡದ ಸಂದರ್ಭದಲ್ಲಿ ನ್ಯಾಯಾಲಯಗಳು ವಿಚ್ಛೇದನಕ್ಕಾಗಿ ಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ತಡೆ ನೀಡಬಹುದು. ಅದು ಬಿಟ್ಟು ಮಧ್ಯಂತರ ಜೀವನಾಂಶ ವಸೂಲಾತಿಗೆ ಸಂಬಂಧಪಟ್ಟ ಅಮಲ್ಜಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಹಾಗೆಯೇ ಜೀವನಾಂಶ ಪಾವತಿಸಿದರೆ, ಆರು ತಿಂಗಳಲ್ಲಿ ಕೌಟುಂಬಿಕ ನ್ಯಾಯಾಲಯವು ಅರ್ಜಿ ವಿಲೇವಾರಿ ಮಾಡಬೇಕು ಎಂದು ಆದೇಶಿಸಿದೆ.

ಗಂಭೀರವಾಗಿ ಪರಿಗಣಿಸಬೇಕು.

ವಿಚಾರಣೆ ವೇಳೆ ನ್ಯಾಯಪೀಠವು, ಮಧ್ಯಂತರ ಜೀವನಾಂಶ ಪಾವತಿಗೆ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಗಂಡ ಪಾಲಿಸಿಲ್ಲ. ಇಂತಹ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಈ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣವೇನು?

ಅರ್ಜಿದಾರೆಯ ಪತಿಯು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ 2016ರಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು 2016ರಿಂದ ವಿಚ್ಛೇದನ ಕೋರಿದ ಮುಖ್ಯ ಅರ್ಜಿಯ ಇತ್ಯರ್ಥದವರೆಗೆ ಮಧ್ಯಂತರ ಜೀವನಾಂಶವಾಗಿ ಪತ್ನಿಗೆ ಮಾಸಿಕ 15 ಸಾವಿರ ರೂ. ಪರಿಹಾರ ನೀಡಬೇಕು. ಜೀವನಾಂಶದ ಹಿಂಬಾಕಿಯನ್ನು ಒಂದು ತಿಂಗಳಲ್ಲಿ ಪಾವತಿಸಬೇಕು ಎಂದು 2019ರಲ್ಲಿ ಆದೇಶಿಸಿತ್ತು. ಆದರೆ, ಪತಿ ಜೀವನಾಂಶದ ಹಿಂಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ, ಜೀವನಾಂಶದ ಹಿಂಬಾಕಿ ಪಾವತಿಸುವವರೆಗೆ ವಿಚ್ಛೇದನ ಕೋರಿಕೆ ಕುರಿತ ಮುಖ್ಯ ಅರ್ಜಿ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದ್ದರು. ಆ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net