

ರಿಪ್ಪನ್‌ಪೇಟೆ: ಶಿವಮೊಗ್ಗವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ರಾಜ್ಯ ಮತ್ತು ರಾಷ್ಟ್ರದ ಗಮನಸೆಳೆದ ಸೀನಿಯರ್ ಸರ್ಜನ್ ಟಿ.ಜಿ.ಮೆಗ್ಗಾನ್, ಶಾಂತವೇರಿ ಗೋಪಾಲ ಗೌಡ ಹಾಗೂ ಕಾಗೋಡು ಚಳವಳಿ ರೂವಾರಿ ಎಚ್.ಗಣಪತಿಯಪ್ಪ ಅವರ ಕಂಚಿನ ಪ್ರತಿಮೆಗಳನ್ನು ಸರ್ಕಾರ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಬೇಕು ಎಂದು ಶಾಂತವೇರಿ ಗೋಪಾಲ ಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.
ಟಿ.ಜಿ.ಮೆಗ್ಗಾನ್ ಅವರು ಮೈಸೂರು ಸಂಸ್ಥಾನದ ಕಾಲದಲ್ಲಿ ಸುಮಾರು 30 ವರ್ಷಗಳ ಸುದೀರ್ಘ ಕಾಲ ಶಿವಮೊಗ್ಗದಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಜಾಗೃತಿ ಯೋಜನೆ ರೂಪಿಸಿ ಸಮಾಜಕ್ಕೆ ಬಹಳದೊಡ್ಡ ಕೊಡುಗೆ ನೀಡಿದ್ದಾರೆ. 1908ರಲ್ಲಿ ನಿವೃತ್ತಿಗೊಂಡು 1936ರಲ್ಲಿ ನಿಧನರಾದರು. ಹಾಗಾಗಿ ಟಿ.ಜಿ.ಮೆಗ್ಗಾನ್ ಅವರ ಪ್ರತಿಮೆಯನ್ನು ಆಸ್ಪತ್ರೆ ಹೊಸ ಕಟ್ಟಡದ ಎದುರು ಸ್ಥಾಪಿಸಬೇಕು ಎಂದು ಕಲ್ಲೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜಿಲ್ಲೆಯ ಲಕ್ಷಾಂತರ ಹಿಂದುಳಿದ ವರ್ಗಗಳ ಗೇಣಿ ರೈತರಿಗೆ ಭೂ ಒಡೆತನ ದೊರೆಯಲು ಕಾರಣಕರ್ತರಾಗಿದ್ದ ಭೂ ಸುಧಾರಣೆಯ ಹರಿಕಾರ ಶಾಂತವೇರಿ ಗೋಪಾಲ ಗೌಡರ ಪ್ರತಿಮೆಯನ್ನು ಸಿಮ್ಸ್ ಆವರಣದಲ್ಲಿ ನಿರ್ಮಿಸಬೇಕು. ಲಕ್ಷಾಂತರ ಬಡ ಮತ್ತು ಹಿಂದುಳಿದ ವರ್ಗಗಳ ಗೇಣಿ ರೈತರಿಗೆ ಭೂ ಒಡೆತನದ ಹಕ್ಕುಪತ್ರ ದೊರೆಯಲು ಕಾರಣರಾದ ಎಚ್.ಗಣಪತಿಯಪ್ಪ ಅವರ ಪ್ರತಿಮೆಯನ್ನು ಆಸ್ಪತ್ರೆಯ ಮಕ್ಕಳ ವಾರ್ಡ್ ಆವರಣದಲ್ಲಿ ಸ್ಥಾಪಿಸಬೇಕು. ಮೂವರು ಮಹನೀಯರ ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಬೇಕು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗುವುದು ಎಂದರು.
ಮುಖಂಡರಾದ ಸಿ.ಈರಪ್ಪ, ಎಚ್.ಎಂ.ಸಂಗಯ್ಯ, ಆದರ್ಶ ಗೌಡ, ವೈ.ಟಿ.ನಾಗರಾಜ, ಕೆ.ಎಂ.ಗಂಗಾಧರ, ಶಂಕರ ನಾಯ್ಕ ಗೋಷ್ಠಿಯಲ್ಲಿದ್ದರು.