'ಹಾಗೆ ಮಾಡಿದ್ದರೆ ಶಿವಾಜಿ ಪ್ರತಿಮೆ ಬೀಳುತ್ತಿರಲಿಲ್ಲ'… ಗಡ್ಕರಿ ಹೇಳಿದ್ದೇನು ಗೊತ್ತಾ?

Nitin Gadkari
Published on

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ಇತ್ತೀಚೆಗೆ ಛತ್ರಪತಿ ಶಿವಾಜಿ ಪ್ರತಿಮೆ ಕುಸಿದ ಘಟನೆಯ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸಮುದ್ರ ತೀರವಾದ್ದರಿಂದ ಮೂರ್ತಿ ತಯಾರಿಕೆಗೆ ‘ಸ್ಟೈನ್ ಲೆಸ್ ಸ್ಟೀಲ್’ ಬಳಸಬೇಕಿತ್ತು ಎಂದು ಹೇಳಿದ್ದಾರೆ.

ಎಫ್‌ಐಸಿಸಿ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ಸಮುದ್ರ ಇರುವ ಕಡೆ ಯಾವುದೇ ನಿರ್ಮಾಣ ಕಾರ್ಯಗಳಿಗೆ ತುಕ್ಕು ತಡೆಗಟ್ಟಲು ಸ್ಟೇನ್ಲೆಸ್ ಸ್ಟೀಲ್ ಅನ್ನು ಬಳಸಲು ಶಿಫಾರಸು ಮಾಡಲಾಗಿದೆ. ಅದೇ ರೀತಿ ಸ್ಟೇನ್‌ಲೆಸ್ ಸ್ಟೀಲ್ ಬಳಸಿದ್ದರೆ ಛತ್ರಪತಿ ಶಿವಾಜಿ ಪ್ರತಿಮೆ ಎಂದಿಗೂ ಕುಸಿಯುತ್ತಿರಲಿಲ್ಲ.

ಮಹಾರಾಷ್ಟ್ರದಲ್ಲಿ ತಾನು ಈ ಹಿಂದೆ ಸಚಿವನಾಗಿದ್ದಾಗ 55 ಮೇಲ್ಸೇತುವೆಗಳನ್ನು ನಿರ್ಮಿಸಿದ್ದನ್ನು ಸ್ಮರಿಸಿದ ಅವರು, ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕಬ್ಬಿಣದ ಸರಳುಗಳಿಗೆ ಪೌಡರ್ ಲೇಪನ ಮಾಡಿ ತುಕ್ಕು ಹಿಡಿಯುವ ಸಾಧ್ಯತೆ ಇಲ್ಲ ಎಂದರು. ಆದರೆ ಅವು ತುಕ್ಕು ಹಿಡಿಯಬಹುದು ಎಂದು ಈಗಷ್ಟೇ ಹೇಳಿದ್ದೇನೆ ಎಂದರು. ಕರಾವಳಿಯ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಬಳಸಬೇಕು ಎಂದು ಅವರು ಪ್ರತಿಪಾದಿಸಿದರು.

ಛತ್ರಪತಿ ಶಿವಾಜಿ ಪ್ರತಿಮೆ 2024ರ ಆ.26ರಂದು ಕುಸಿದು ಬಿದ್ದಿತ್ತು. ಬಳಿಕ ಪ್ರತಿಮೆ ನಿರ್ಮಿಸಿದ ಜಯದೀಪ್ ಆಪ್ಟೆ ತಲೆಮರೆಸಿಕೊಂಡಿದ್ದು, ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರತಿಮೆ ಬಿದ್ದಿದ್ದಕ್ಕೆ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದವು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಕ್ಷಮೆಯಾಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net