ವಿಧಾನ ಸೌಧದ ಮುಂಭಾಗ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿವೆ ಅಶ್ವಾರೂಢ ಭಂಗಿಯಲ್ಲಿ ಬಸವಣ್ಣ, ಕೆಂಪೇಗೌಡರ ಪ್ರತಿಮೆ

ವಿಧಾನ ಸೌಧ
Published on

ಬೆಂಗಳೂರು: ಜಗಜ್ಯೋತಿ ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಕಂದಾಯ ಸಚಿವ ಆರ್​.ಅಶೋಕ್ ಮತ್ತು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸ್ಥಳ ಪರಿಶೀಲನೆ ಮಾಡಿದರು.

ಬಸವಣ್ಣ ಮತ್ತು ಕೆಂಪೇಗೌಡರ ಪ್ರತಿಮೆಗಳ ಮಾದರಿಯನ್ನು ಸಿದ್ಧಪಡಿಸಿ ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಲು ಸೂಕ್ತ ಸ್ಥಳ ನಿಗದಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿತ್ತು. ಅದರಂತೆ ಸಿದ್ಧಪಡಿಸಿಕೊಂಡಿರುವ ನೀಲನಕ್ಷೆ ಮತ್ತು ಪ್ರತಿಮೆಗಳ ಮಾದರಿಗಳನ್ನು ಉಭಯ ಸಚಿವರು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಪ್ರತಿಮೆಗಳನ್ನು ಶೀಘ್ರದಲ್ಲಿ ನಿರ್ಮಿಸಿ, ವಿಧಾನಸೌಧದ ಮುಂಭಾಗ ಇದೇ ತಿಂಗಳಿನಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಉಭಯ ಸಚಿವರೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಲಾ ನಾಲ್ಕು ಮೀಟರ್ ಎತ್ತರದ ಈ ಎರಡು ಪುತ್ತಳಿಗಳನ್ನು ಅಶ್ವಾರೂಢ ಭಂಗಿಗಳಲ್ಲಿ ಸ್ಥಾಪಿಸಬೇಕು ಮತ್ತು ಸುತ್ತಮುತ್ತ ಹಸಿರು ಸೂಸುವ ಪರಿಸರವನ್ನು ಕಾಪಾಡಿಕೊಳ್ಳಬೇಕೆಂದು ಸಚಿವ ಆರ್​​. ಅಶೋಕ್ ಮತ್ತು ಸಿ.ಸಿ. ಪಾಟೀಲ್ ಆದೇಶಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೃಷ್ಣಾ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net