

ಎಚ್.ಡಿ.ಕೋಟೆ: ದಲಿತರ ಭೂಮಿ, ವಸತಿ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.18ರಂದು ರಾಜ್ಯಾದ್ಯಂತ ದಸಂಸ ಅಂಬೇಡ್ಕರ್ ರಾಜ್ಯ ಸಮಿತಿ ವತಿಯಿಂದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬೆಂಬಲವಾಗಿ ಮೈಸೂರು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ತಿ.ನರಸೀಪುರ, ಪಿರಿಯಾಪಟ್ಟಣ, ಕೆ.ಆರ್.ನಗರ, ಸಾಲಿಗ್ರಾಮ ಹಾಗೂ ಮೈಸೂರು ತಾಲೂಕಿನ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು ಪ್ರತಿಭಟನೆಗೆ ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಅನ್ಯಾಯಕ್ಕೆ ಒಳಗಾದ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಭೂಮಿ ಮನುಷ್ಯನಿಗೆ ಶಾಶ್ವತ ಸಂಪತ್ತು, ದೇಶದ ಆರ್ಥಿಕ ಅಸಮಾನತೆಗೆ ಭೂಮಿ ಸಮಾನ ಹಂಚಿಕೆಯಗವಿರುವುದು ಒಂದು ಪ್ರಮುಖ ಕಾರಣ ಹಾಗೂ ಶೋಷಿತ ಸಮುದಾಯಗಳ ನಿರಂತರ ಶೋಷಣೆ ಮತ್ತು ದಬ್ಬಾಳಿಕೆಗೂ ಬೇತ ಪದ್ಧತಿ ಮತ್ತು ಉಳಿಗಮಾನ್ಯ ಪದ್ಧತಿಯ ಜೀವಂತಿಕೆಗೂ ದಲಿತರಿಗೆ ಭೂಮಿ ದಕ್ಕದಿರುವುದೇ ಕಾರಣವಾಗಿದೆ.
ದರಖಾಸ್ತು ಭೂಮಿ ಸಕ್ರಮೀಕರಣವು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆ ಹೊಂದಿರುವ ಸಮಿತಿಗಳು ನಿರ್ಲಕ್ಷತೆಯಿಂದ ಸರಿಯಾಗಿ ಕೆಲಸ ನಿರ್ವಹಿಸದೆ ಅರ್ಜಿ ನಮೂನೆ 53 54 57 ರಲ್ಲಿ ಸಲ್ಲಿಸಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಮತ್ತು ತಳಸಮುದಾಯಗಳ ಅರ್ಜಿಗಳು ರಾಶಿಗಟ್ಟಲೇ ಕೊಳೆಯುತ್ತಾ ಬಿದ್ದಿದೆ. ಬಾಬಾ ಸಾಹೇಬ ಅಂಬೇಡ್ಕರ್ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಚಳವಳಿಗಳು ಹಿಂದಿನಿಂದಲೂ ಭೂಮಿ, ಶಿಕ್ಷಣ, ವಸತಿ ಹಾಗೂ ಉದ್ಯೋಗ ಮತ್ತು ಮೂಲ ಸೌಕರ್ಯಗಳಿಗಾಗಿ ಆಳುವ ಪ್ರಭುತ್ವದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಲೇ ಬಂದಿದೆ. ಆದರೆ ಆಳುವ ಸರ್ಕಾರ ತನ್ನ ವಿಫಲತೆಯನ್ನು ತೋರುತ್ತಲೇ ಬಂದಿವೆ. ಆದ್ದರಿಂದ ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.