

ಬೆಂಗಳೂರು: ಉತ್ತಮ ರೂಢಿಗಳ ವಿನಿಯಮದ ಭಾಗವಾಗಿ ಆಂಧ್ರಪ್ರದೇಶಕ್ಕೆ ರಾಜ್ಯದ ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದೆ, ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಮೇಲೆ 21ರಂದು ಆನೆಗಳ ಹಸ್ತಾಂತರ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಡಿಸಿಎಂ ಪವನಕಲ್ಯಾಣ್ ಭಾಗವಹಿಸಲಿದ್ದಾರೆ.
ನೆರೆ ರಾಜ್ಯದೊಂದಿಗೆ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜತೆಗೆ ಕರ್ನಾಟಕ ಗಡಿ ಜಿಲ್ಲೆ ಕೋಲಾರ ಮತ್ತು ಆಂಧ್ರದ ಗಡಿ ಜಿಲ್ಲೆ ಚಿತ್ತೂರು ಜಿಲ್ಲೆಗಳಲ್ಲಿ ಪುಂಡಾನೆಗಳ ಸಮಸ್ಯೆ ಬಗೆಹರಿದು, ಪರೋಕ್ಷವಾಗಿ ರಾಜ್ಯಕ್ಕೆ ಪ್ರಯೋಜನವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಅಥವಾ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ಗುರುತಿಸಿರುವ ಯಾವುದೇ ಕುಮ್ಕಿ ಆನೆಯನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಈಶ್ವರಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಆಗಸ್ಟ್‌ನಲ್ಲಿ ನಡೆದ ಮಾನವ-ಆನೆ ಸಂಘರ್ಷದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಮಧ್ಯೆ ಒಪ್ಪಂದ ಏರ್ಪಟ್ಟಿದೆ.
ನಂತರ ಆಂಧ್ರಪ್ರದೇಶ ಡಿಸಿಎಂ ಪವನಕಲ್ಯಾಣ್ ಬೆಂಗಳೂರಿಗೆ ಆಗಮಿಸಿ ಆಂಧ್ರದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳ ಹತೋಟಿಗೆ ಕುಮ್ಕಿ ಆನೆಗಳು ಜತೆಗೆ ತಮ್ಮ ರಾಜ್ಯದ ಮಾವುತರು ಮತ್ತು ಸಿಬ್ಬಂದಿಗೆ ತರಬೇತಿ ನೀಡಲು ಮನವಿ ಮಾಡಿದ್ದರು.
ಬಳಿಕ ಆಂಧ್ರಪ್ರದೇಶದ ವಿಜಯವಾಡಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ್ದ ಸಂರ್ಭದಲ್ಲಿ ಕುಮ್ಕಿ ಅನೆಗಳ ಹಸ್ತಾಂತರ ಕುರಿತು ಉಭಯ ರಾಜ್ಯಗಳು ಪರಸ್ಪರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದವು.