

ಯಾಕೆಂದರೆ ಇಲ್ಲಿ ಅನೇಕ ವಿಷಯಗಳ ಸಂಗ್ರಹ ಒಂದೇಕಡೆ ನಮಗೆ ದೊರೆಯುತ್ತದೆ. ಹಿಂದೆ ವೈರಾಗ್ಯ ಪ್ರಕರಣದಲ್ಲಿ ತೀರ್ಥಯಾತ್ರೆಯ ಸಂದರ್ಭದಲ್ಲಿ ಭಾರತದೇಶದ ತೀರ್ಥಕ್ಷೇತ್ರಗಳ ಯಾದಿ, ಸಿದ್ಧಮುನಿಗಳ ಯಾದಿ, ಯುದ್ಧದ ಸಂದರ್ಭದಲ್ಲಿ ಪ್ರಾಚೀನಕಾಲದ ಆಯಧಗಳ ಯಾದಿ, ಭರತಖಂಡದ ವಿವಿಧ ದೇಶ (ರಾಜ್ಯ)ಗಳ ಯಾದಿ ಹೀಗೆ ಒಂದೊಂದು ವಿಷಯಗಳಿಗೆ ಸಂಬಂಧಿಸಿದಂತೆ ಆ ಕಾಲದ ಸಮಗ್ರ ಮಾಹಿತಿಗಳ ಸಂಗ್ರಹ ಇಲ್ಲಿ ನಮಗೆ ಸಿಗುತ್ತದೆ.
ಈಗ ಶ್ರೀವಸಿಷ್ಠರು ಯುದ್ಧರಂಗದಲ್ಲಿ ವಿದೂರಥ (ಪದ್ಮಮಹಾರಾಜ)ನ ಪಕ್ಷದಲ್ಲಿರುವ ವಿವಿಧ ದೇಶಗಳ ಪಟ್ಟಿಯನ್ನು ಹೇಳಿ ಮುಗಿಸಿದ ನಂತರ ಅವನ ವಿರುದ್ಧ ಪಕ್ಷವಾದ ಸಿಂಧುರಾಜನ ಕಡೆ ಇರುವ ದೇಶಗಳ ಪಟ್ಟಿಯನ್ನು ಕೊಡುತ್ತಿದ್ದಾರೆ. ಭಾರತದ ಮಧ್ಯಭಾಗದಲ್ಲಿ ನಿಂತುಕೊಂಡು ಪೂರ್ವದಿಕ್ಕಿನಿಂದ ಆರಂಭಿಸಿ ದೇಶಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಪೂರ್ವ, ಆಗ್ನೇಯ, ದಕ್ಷಿಣ, ನಿರ್Mುತಿ ಇವಿಷ್ಟು ದಿಕ್ಕುಗಳಲ್ಲಿರುವ ದೇಶಗಳು ವಿದೂರಥನ ಕಡೆ ಇವೆ. ಪಶ್ಚಿಮದಿಂದ ಆರಂಭಿಸಿ ಸಿಂಧುರಾಜನ ಕಡೆ ಇರುವ ದೇಶಗಳನ್ನು ಈಗ ಹೇಳುತ್ತಿದ್ದಾರೆ.
‘ಶ್ರೀರಾಮ! ದಕ್ಷಿಣ ಕತಕ ದೇಶ ಮತ್ತು ಉತ್ತರ ಕತಕ ದೇಶ ಇವೆರಡರ ಪಾರ್ಶ್ವದಲ್ಲಿ ವಾಸವಾಗಿರುವ ಕರ್ಕವೆಂಬ ಜನಾಂಗ, ಗಿರಿಪರ್ಣ ಮತ್ತು ವಮ ಎಂಬ ದೇಶಗಳಿವೆ. ಈ ವಮ ಎಂಬ ಜನಾಂಗದವರು ಧರ್ಮದ ಕಟ್ಟಲೆಗಳನ್ನು ಬಿಟ್ಟವರು ಮತ್ತು ಮ್ಲೇಂಚ್ಛ ಜಾತಿಗೆ ಸೇರಿದ ವರ್ಣದವರು. ಇವರು ಸಿಂಧುರಾಜನ ಕಡೆಗೆ ಇದ್ದಾರೆ.’
‘ಇದಕ್ಕೂ ಮುಂದೆ ಎರಡುನೂರು ಯೋಜನಗಳಷ್ಟು ಭೂಪ್ರದೇಶದಲ್ಲಿ ಯಾವುದೇ ಜನಾಂಗ ವಾಸವಾಗಿಲ್ಲ (ಮರುಭೂಮಿಯಾಗಿರಬಹುದು). ನಂತರ ಮಹೇಂದ್ರ ಪರ್ವತವಿದೆ. ಅಲ್ಲಿಯ ಭೂಮಿ ಮುತ್ತಿನ ಮಣಿಯಂತಹ ಬಣ್ಣದಿಂದ ಕೂಡಿದೆ. ಅಲ್ಲಿಂದ ಮತ್ತೂ ಪಶ್ಚಿಮಕ್ಕೆ ನೂರಾರು ಶಿಖರಗಳುಳ್ಳ ಅಶ್ವವೆಂಬ ಪರ್ವತವಿದೆ. ಅದಕ್ಕಿಂತಲೂ ಮುಂದೆ ಭಯಂಕರವಾದ ಮಹಾಸಮುದ್ರವಿದೆ. ಅದರ ತಟದಲ್ಲಿ ಪಾರಿಯಾತ್ರ ಎಂಬ ಗಿರಿಯಿದೆ.’
‘ಇನ್ನು ವಾಯವ್ಯ ದಿಕ್ಕಿನಲ್ಲಿರುವ ದೇಶಗಳಿಂದ ಸಿಂಧುರಾಜನಿಗೆ ಇರುವ ಬೆಂಬಲವನ್ನು ಹೇಳೋಣ. ಅಲ್ಲಿ ಗಿರಿಮತಿ, ವೇಣುಪತಿ ಮತ್ತು ನರಪತಿಯೆಂಬ ದೇಶಗಳಿವೆ. ನರಪತಿ ದೇಶದಲ್ಲಿ ನಿತ್ಯ ಉತ್ಸವಗಳಿರುತ್ತವೆ. ಉತ್ಸವಗಳಿಂದಲೇ ಈ ದೇಶವು ಪ್ರಸಿದ್ಧವಾಗಿದೆ. ಆನಂತರ ಫಲ್ಗುಣಕ, ಮಾಂಡವ್ಯ, ಅನೇಕನೇತ್ರಕ, ಪುರುಕುಂದ, ಪಾರ ಎಂಬ ದೇಶಗಳಿವೆ. ಈ ಪಾರ ಎಂಬ ದೇಶದವರು ಸೂರ್ಯಮಂಡಲವನ್ನು ಉಪಾಸನೆ ಮಾಡುವ ರೂಢಿಯುಳ್ಳವರು. ಆನಂತರ ವನ್ಮಿಲ, ನಲಿನ, ದೀರ್ಘ ಎಂಬ ದೇಶಗಳಿವೆ. ದೀರ್ಘ ಎಂಬ
ಹೆಸರು ಈ ದೇಶಕ್ಕೆ ಬರಲು ಕಾರಣವೇ ನೆಂದರೆ ಇಲ್ಲಿರುವ ಮನುಷ್ಯರಿಗೆ ದೀರ್ಘವಾದ ಕೂದಲು, ದೀರ್ಘವಾದ ಅಂಗಗಳು ಮತ್ತು ದೀರ್ಘವಾದ ಬಾಹುಗಳಿರುತ್ತವೆ. ಮುಂದೆ ರಂಗ, ಸ್ತನಿಕ, ಗುರುಹ, ಚಲುಹ ಎಂಬ ದೇಶಗಳಿವೆ. ಇನ್ನೂ ಆಚೆಗೆ ಹೋಲಿಕೆ ಇಲ್ಲದ ಸ್ತ್ರೀರಾಷ್ಟ್ರವಿದೆ. ಈ ರಾಷ್ಟ್ರದ ವಿಶೇಷ ವೇನೆಂದರೆ ಇಲ್ಲಿಯ ಜನ ಎತ್ತುಗಳನ್ನು, ಕರುಗಳನ್ನು ಆಹಾರಕ್ಕೆ ಬಳಸುತ್ತಾರೆ. (ಹೀಗೆ ವಾಯವ್ಯ ದಿಕ್ಕಿನಲ್ಲಿ ಹದಿನಾರು ದೇಶದವರು ಸಿಂಧುರಾಜನ ಪಕ್ಷದಲ್ಲಿ ದ್ದಾರೆ.)
ಇನ್ನು ಉತ್ತರ ದಿಕ್ಕಿನಲ್ಲಿ ಹಿಮವಂತ (ಹಿಮಾಲಯ), ಕ್ರೌಂಚ, ಮಧುವಂತ, ಕೈಲಾಸ, ವಸುಮಂತ, ಮೇರು ಎಂಬ ಆರು ಪರ್ವತಗಳಿವೆ. ಈ ಪರ್ವತ ಪ್ರಾಂತಗಳ ಮತ್ತು ಪರ್ವತ ಸಮೀಪ ಪ್ರಾಂತಗಳ ಜನರೂ ಸಿಂಧುರಾಜನ ಕಡೆ ಇದ್ದಾರೆ. ಅಲ್ಲದೇ ಮದ್ರ, ವಾರೇವ, ಯೌಧೇಯ, ಮಾಲವ, ಶೂರಸೇನಿಕ ದೇಶಗಳ ಕ್ಷತ್ರಿಯರಿದ್ದಾರೆ. ಅರ್ಜುನಾತನಯ, ತ್ರಿಗರ್ತ, ಏಕಪಾದ, ಕ್ಷುದ್ರ, ಆಮಬಲ, ಸ್ವಸ್ತವಾಸಿ, ಅಬಲ, ಪ್ರಖಲ, ಶಾಕ, ಕ್ಷೇಮಧೂರ್ತಿ ಎಂಬ ದೇಶಗಳ ಕ್ಷತ್ರಿಯರಿದ್ದಾರೆ. ಹತ್ತು ಪ್ರಕಾರದ ನಾಗ ಜನಾಂಗದವರು, ಅವಸಿನೀ, ಅದಂಡ ಜನಾಂಗದವರಿದ್ದಾರೆ.
ಈ ಅದಂಡ ಜನಾಂಗದವರು ಹಗಲಿನಲ್ಲಿ ಆಹಾರ ತೆಗೆದುಕೊಳ್ಳುವುದಿಲ್ಲ. ಧಾನದ, ಸರಕ, ವಾಟಧಾನ, ಅಂತರದ್ವೀಪ, ಗಾಂಧಾರ, ಅವಂತಿ, ಸುರ ಎಂಬ ದೇಶಗಳಿವೆ. ಅನಂತರ ತಕ್ಷಶಿಲ, ವೀಲವ, ಗೋಧನಿ ಮತ್ತು ಪುಷ್ಕರಾವರ್ತ ಎಂಬ ದೇಶದ ಯಶೋವತಿ ಎಂಬ ಭೂಭಾಗಗಳು ಇವೆ. ಅನಂತರ ನಾಭಿಮತಿ ಎಂಬ ಭೂಭಾಗ. ತಿಕ್ಷ, ಕಾಲವರ ಎಂಬ ದೇಶಗಳು ಇವೆ. ಮುಂದೆ ಕಾಹಕ ಎಂಬ ನಗರ ಮತ್ತು ಸುರಭೂತಿಪುರಗಳಿವೆ.
ರತಿಕಾದರ್ಶ, ಅಂತರಾದರ್ಶ, ಪಿಂಗಲಪಾಂಡವ್ಯ ದೇಶಗಳಿವೆ. ಯಾಮುನ ಎಂಬ ದೇಶದಲ್ಲಿ ಯಾತುಧಾನಕ ಎಂಬ ಜನರಿದ್ದಾರೆ. (ಸಂಸ್ಕೃತದಲ್ಲಿ ಯಾತುಧಾನ ಎಂದರೆ ರಾಕ್ಷಸರು. ಆದ್ದರಿಂದ ಯಾತುಧಾನಕ ಎಂದರೆ ರಾಕ್ಷಸರಿರಬಹುದು.) ಅನಂತರ ಮಾನವ, ನಾಂಗನ, ಹೇಮತಾಲ, ಸ್ವಸ್ವಮುಖ ಎಂಬ ದೇಶಗಳಿವೆ. ಪರ್ವತಗಳಲ್ಲಿ ಹಿಮವಂತ,(ಹಿಮಾಲಯ), ವಸುಮಂತ, ಕ್ರೌಂಚ, ಮತ್ತು ಕೈಲಾಸ ಎಂಬ ಪರ್ವತಗಳು ಮುಂದೆ ಬರುತ್ತವೆ. (ಈ ನಾಲ್ಕು ಪರ್ವತಗಳ ಹೆಸರು ಹಿಂದೆ ಒಮ್ಮೆ ಬಂದಿದೆ. ಉತ್ತರ ದಿಕ್ಕಿನಲ್ಲಿರುವ ದೇಶಗಳನ್ನು ಹೇಳುವಾಗ ಎಲ್ಲ ದೇಶಗಳಿಗಿಂತ ಮೊಟ್ಟಮೊದಲು ಈ ಪರ್ವತಗಳನ್ನು ಹೇಳಲಾಗಿದೆ. ಈಗ ಉತ್ತರ ದಕ್ಕಿನಲ್ಲಿರುವ ದೇಶಗಳ ಪಟ್ಟಿಯ ಕೊನೆಯಲ್ಲಿ ಮತ್ತೊಮ್ಮೆ ಹೇಳಲಾಗುತ್ತಿದೆ. ಪ್ರದಕ್ಷಿಣಾಕಾರದಲ್ಲಿ ಹೇಳುತ್ತಾ ಹೋದರೆ ಆರಂಭದಲ್ಲಿ ಬಂದ ಅಂಶಗಳೇ ಕೊನೆಯಲ್ಲಿ ಮತ್ತೊಮ್ಮೆ ಬರುತ್ತದೆ. ಆದ್ದರಿಂದ ಉತ್ತರ ದಿಕ್ಕಿನಲ್ಲಿರುವ ದೇಶಗಳನ್ನು ಶ್ರೀವಸಿಷ್ಠರು ಪ್ರದಕ್ಷಿಣಾಕಾರದಲ್ಲಿ ಹೇಳಿದ್ದಾರೆ ಎಂಬುದನ್ನು ಊಹಿಸಬಹುದಾಗಿದೆ.) ಈ ಪರ್ವತಗಳ ಆಚೆಗೆ ಒಂಭತ್ತು ಯೋಜನಗಳಷ್ಟು ಭೂಭಾಗ ಜನವಸತಿಯಿಲ್ಲದ ಭೂಮಿಯಾಗಿದೆ.’
‘ಭರತಖಂಡದ ಎಲ್ಲಾ ದಿಗ್ಭಾಗದಲ್ಲಿ ಇರುವ ದೇಶಗಳ ಆ ಕಾಲದ ಪಟ್ಟಿಯನ್ನು ಕೊಡುತ್ತಿದ್ದಾರೆ. ಇವುಗಳಲ್ಲಿ ಅನೇಕ ದೇಶಗಳು ಮತ್ತು ಪರ್ವತಗಳು ಈಗಲೂ ಅದೇ ಹೆಸರಿನಿಂದ ಪ್ರಸಿದ್ಧವಾಗಿವೆ.