ಶುಭ ಸೂಚನೆ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದವರ ಮೇಲುಗೈ

fghfgh
Published on

ಈ ಸಲದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಬಂದಿದೆ. ಕರ್ನಾಟಕದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ದೇಶಾದ್ಯಂತ ಟಾಪ್ 50 ಜನರಲ್ಲಿ 9 ಅಂದರೆ ಶೇ. 18ರಷ್ಟು ಕರ್ನಾಟಕದವರೇ ಇರುವುದು ಸಹಜವಾಗಿ ಹೆಮ್ಮೆ ತರುವ ಸಂಗತಿ. ನೀಟ್ ಅನ್ನು ಮೊದಲು ಆಲ್ ಇಂಡಿಯಾ ಪ್ರಿ-ಮೆಡಿಕಲ್ ಟೆಸ್ಟ್ (ಎಐಪಿಎಂಟಿ) ಎಂದು ಕರೆಯಲಾಗುತ್ತಿತ್ತು. 2013ರ ಮೇ 5ರಂದು ಮೊದಲ ಬಾರಿಗೆ ನೀಟ್ ಹೆಸರಿನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.

ಎಂಬಿಬಿಎಸ್, ಬಿಡಿಎಸ್, ಆಯುರ್ವೆದ, ಹೋಮಿಯೋಪಥಿ ಸೇರಿದಂತೆ ಎಲ್ಲ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್​ಗಳಿಗೆ ಪ್ರವೇಶಕ್ಕೆ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಬಾರಿ ರಾಜ್ಯದಿಂದ 1,22,423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 72,262 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಈ ಎಲ್ಲರಿಗೂ ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶ ಸಿಗುತ್ತದೆ ಎಂದೇನಲ್ಲ. ದೇಶಾದ್ಯಂತ 17.64 ಲಕ್ಷ ಜನರು ಪರೀಕ್ಷೆ ಬರೆದಿದ್ದು, ಅರ್ಹತೆ ಪಡೆದವರ ಸಂಖ್ಯೆ 9.93 ಲಕ್ಷ ಇದೆ. ದೇಶದಲ್ಲಿ ಒಟ್ಟಾರೆಯಾಗಿ ಲಭ್ಯವಿರುವ ಸರ್ಕಾರಿ ವೈದ್ಯಕೀಯ ಸೀಟುಗಳ ಸಂಖ್ಯೆ 48,012. ಇದರಲ್ಲಿ ಶೇ. 15ರಷ್ಟನ್ನು ಮಾತ್ರ ಅಂದರೆ ಅಂದಾಜು 7201 ಸೀಟುಗಳನ್ನು ಅಖಿಲ ಭಾರತ ಮಟ್ಟದಲ್ಲಿ ಹಂಚಲಾಗುತ್ತದೆ. ಉಳಿದ ಶೇ. 85ರಷ್ಟನ್ನು ಆಯಾ ರಾಜ್ಯಗಳ ಅಭ್ಯರ್ಥಿಗಳ ಆಯ್ಕೆಗೆ ಒದಗಿಸಲಾಗುತ್ತದೆ. ಇದರನುಸಾರವಾಗಿ ರಾಜ್ಯದ ಅಭ್ಯರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಉನ್ನತ ರ್ಯಾಂಕ್​ಗಳನ್ನು ಪಡೆದುಕೊಂಡು ಬೇರೆ ರಾಜ್ಯಗಳಲ್ಲಿ ಸೀಟು ಗಿಟ್ಟಿಸಿಕೊಂಡರೆ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರಾಗಿ ಹೊರಹೊಮ್ಮಲು ಅನುವಾಗುತ್ತದೆ.

ಈ ಸಾಲಿನಿಂದ ರಾಜ್ಯದಲ್ಲಿ ವೈದ್ಯಕೀಯ ಪದವಿಯಲ್ಲಿ 650 ಹಾಗೂ ಸ್ನಾತಕೋತ್ತರ ವೈದ್ಯಕೀಯದಲ್ಲಿ 216 ಅಧಿಕ ಸೀಟುಗಳು ಲಭಿಸುತ್ತಿದೆ. ಈ ಮೂಲಕ ರಾಜ್ಯದಲ್ಲಿ ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ 10,795 ಹಾಗೂ ಪಿಜಿ ಸೀಟುಗಳ ಸಂಖ್ಯೆ 5360ಕ್ಕೆ ಏರುತ್ತಿದೆ. ಸರ್ಕಾರಿ ಕೋಟಾದಲ್ಲಿ ಮೆರಿಟ್ ಆಧಾರದಲ್ಲಿ ಪ್ರವೇಶ ಪಡೆದುಕೊಳ್ಳುವ ಅಭ್ಯರ್ಥಿಗಳ ಅಧ್ಯಯನಕ್ಕೆ ಸರ್ಕಾರ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಈ ಹಣ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ್ದೇ ಆಗಿರುತ್ತದೆ. ಇದಕ್ಕೆ ಪ್ರತಿಯಾಗಿ ವೈದ್ಯರಾಗಿ ಹೊರಹೊಮ್ಮುವ ಅಭ್ಯರ್ಥಿಗಳು ಸಮಾಜಮುಖಿಯಾಗಿ, ಅದರಲ್ಲೂ ವಿಶೇಷವಾಗಿ ತಾಯ್ನಾಡಿನಲ್ಲಿ ಸೇವೆ ಸಲ್ಲಿಸಬೇಕೆಂಬ ಅಪೇಕ್ಷೆ ಸಾರ್ವಜನಿಕರದ್ದಾಗಿದೆ. ಈ ಮೊದಲು ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತರ ಭಾರತದವರೇ ಮೇಲುಗೈ ಸಾಧಿಸುತ್ತಿದ್ದರು.

ಈಗ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿದ್ಯಾರ್ಥಿಗಳೂ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ನೇಮಕಾತಿಗಳಿಗೆ ನಡೆದ 2021ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಜ್ಯದ 26 ಮಂದಿ ಆಯ್ಕೆಯಾಗಿರುವುದು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳು ಯಶ ಕಾಣುತ್ತಿರುವುದರ ಸಂಕೇತವಾಗಿದೆ. ಒಟ್ಟಿನಲ್ಲಿ, ರಾಜ್ಯದ ಪ್ರತಿಭೆಗಳು ಆಡಳಿತದ ಉನ್ನತ ಹಂತಗಳಲ್ಲಿ ಅಭಿವೃದ್ಧಿಪರವಾಗಿ, ಜನಪರವಾಗಿ ಕೆಲಸಮಾಡಲೆಂಬುದು ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net