ಇಂಡಿಯಾ ಅಭ್ಯರ್ಥಿ ನಕ್ಸಲ್ ಬೆಂಬಲಿಗರು ಎಂಬ ಹೇಳಿಕೆ; ಅಮಿತ್ ಶಾ ಆ ತೀರ್ಪು ಓದಿಲ್ಲ, ಅದು ನನ್ನದಲ್ಲ ಸುಪ್ರೀಂಕೋರ್ಟ್ ತೀರ್ಪು; ನ್ಯಾ.ಸುದರ್ಶನ್ ರೆಡ್ಡಿ| Sudarshan Reddy

Sudarshan reddy
Published on

Sudarshan Reddy: ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನಕ್ಸಲ್ ಬೆಂಬಲಿಗರು ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಆರೋಪಕ್ಕೆ ತಿರುಗೇಟು ನೀಡಿರುವ ನ್ಯಾ. ಸುದರ್ಶನ್ ರೆಡ್ಡಿ, ಅವರು ಸಂಪೂರ್ಣ ಆ ತೀರ್ಪು ಓದಿಲ್ಲ, ಅದು ನನ್ನದಲ್ಲ ಸುಪ್ರೀಂಕೋರ್ಟ್ ತೀರ್ಪು. ಇಂತಹ ವಾದ ವಿವಾದದಲ್ಲಿ ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಕೂಟದ ಅಭ್ಯರ್ಥಿಯಾಗಿರುವ ನಿವೃತ್ತ ನ್ಯಾ.ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್,ನಿಜ್ಜರ್ ನೇತೃತ್ವದ ದ್ವಿಸದಸ್ಯ ಪೀಠ 2011ರಲ್ಲಿ ನಕ್ಸಲರ ವಿರುದ್ಧ ಬುಡಕಟ್ಟು ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಬಳಸುವುದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ತೀರ್ಪು ನೀಡಿ ಸಾಲ್ವಾ ಜುಡುಂ ಅನ್ನು ರದ್ದುಗೊಳಿಸಿತ್ತು. ಈ ತೀರ್ಪು ಕುರಿತಂತೆ ಅಮಿತ್ ಶಾ ಟೀಕಿಸಿ, ಅವರನ್ನು ನಕ್ಸಲ್ ಬೆಂಬಲಿಗರು ಎಂದು ಕರೆದಿದ್ದರು.

ಈ ಕುರಿತು ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ಅವರು, "ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕನ ಜೀವನ, ಸ್ವಾತಂತ್ರ್ಯ ಹಾಗೂ ಆಸ್ತಿಯನ್ನು ರಕ್ಷಿಸುವುದು ಸಾಂವಿಧಾನಿಕ ಕರ್ತವ್ಯ ಮತ್ತು ಬಾಧ್ಯತೆಯಾಗಿದೆ. ಗೃಹ ಸಚಿವರೊಂದಿಗೆ ನಾನು ನೇರವಾಗಿ ಈ ವಿಷಯದಲ್ಲಿ ವಾದಕ್ಕೆ ಇಳಿಯುವುದಿಲ್ಲ. ಎರಡನೆಯದಾಗಿ, ನಾನು ತೀರ್ಪನ್ನು ಬರೆದಿದ್ದೇನೆ. ತೀರ್ಪು ನನ್ನದಲ್ಲ, ತೀರ್ಪು ಸುಪ್ರೀಂ ಕೋರ್ಟ್‌ನದು" ಎಂದು ತಿಳಿಸಿದ್ದಾರೆ.

"ತೀರ್ಪಿನ ಗುಣಮಟ್ಟದ ಬಗ್ಗೆ ನಾನು ಮಾತನಾಡುವುದಿಲ್ಲ. ಏಕೆಂದರೆ ನನ್ನ ಸಹೋದ್ಯೋಗಿಗಳಿಂದ ನನಗೆ ತರಬೇತಿ ನೀಡಲಾಗಿದೆ. ಒಬ್ಬರು ತಮ್ಮದೇ ತೀರ್ಪಿನ ಶ್ರೇಷ್ಠತೆಯ ಬಗ್ಗೆ ಮಾತನಾಡಬಾರದು ಎಂದು. ಜನರೇ ಅದನ್ನು ನಿರ್ಣಯಿಸಬೇಕು. ಇದು ನನ್ನ ವೈಯಕ್ತಿಕ ದಾಖಲೆಯಲ್ಲ. ಗೃಹ ಸಚಿವರು ಬೇರೆಯವರಿಂದ ತೀರ್ಪಿನ ಬಗ್ಗೆ ತಿಳಿಯುವ ಬದಲು,  ಸಂಪೂರ್ಣ ತೀರ್ಪನ್ನು ತಾವೇ ಓದಬೇಕೆಂದು ನಾನು ಬಯಸುತ್ತೇನೆ. ಸುಮಾರು 40 ಪುಟಗಳ ತೀರ್ಪನ್ನು ಓದಲು ಆಷ್ಟು ಸಮಯ ಇರಲಿಕ್ಕಿಲ್ಲ. ಅವರು ತೀರ್ಪನ್ನು ಓದಿದ್ದರೆ, ಬಹುಶಃ ಆ ಕಾಮೆಂಟ್ ಮಾಡುತ್ತಿರಲಿಲ್ಲ. ಅಷ್ಟೇ ಹೇಳುತ್ತೇನೆ ಮತ್ತು ಅದನ್ನು ಅಲ್ಲಿಯೇ ಬಿಡುತ್ತೇನೆ" ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net