KSCA ಚುನಾವಣೆಗೆ ‘ಟೀಮ್ ಗೇಮ್ ಚೇಂಜರ್ಸ್‌’ ಸಜ್ಜು: ಕರ್ನಾಟಕ ಕ್ರಿಕೆಟ್‌ಗೆ ಮರುಚೈತನ್ಯ ತುಂಬುವ ಯೋಜನೆ

KSCA ಚುನಾವಣೆಗೆ ‘ಟೀಮ್ ಗೇಮ್ ಚೇಂಜರ್ಸ್‌’ ಸಜ್ಜು:  ಕರ್ನಾಟಕ ಕ್ರಿಕೆಟ್‌ಗೆ ಮರುಚೈತನ್ಯ ತುಂಬುವ ಯೋಜನೆ
KSCA ಚುನಾವಣೆಗೆ ‘ಟೀಮ್ ಗೇಮ್ ಚೇಂಜರ್ಸ್‌’ ಸಜ್ಜು: ಕರ್ನಾಟಕ ಕ್ರಿಕೆಟ್‌ಗೆ ಮರುಚೈತನ್ಯ ತುಂಬುವ ಯೋಜನೆ
Published on
ಬೆಂಗಳೂರು: ಮುಂಬರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹಾಗೂ ಕ್ರೀಡಾ ಆಡಳಿತಾಧಿಕಾರಿ ವಿನಯ್ ಮೃತ್ಯುಂಜಯ್ ತಮಗೆ ಬೆಂಬವಾಗಿರುವ ಸಮಾನಮನಸ್ಕ ಇತರ ಸದಸ್ಯರನ್ನು ಒಳಗೊಂಡ ‘ಟೀಮ್ ಗೇಮ್ ಚೇಂಜರ್ಸ್‌’ ಎಂಬ ಹೆಸರಿನ ತಂಡವನ್ನು ಬಹಿರಂಗ ಪಡಿಸಿದ್ದಾರೆ. 
ನವೆಂಬರ್ 30ರಂದು ಚುನಾವಣೆ ನಿಗದಿಯಾಗಿದ್ದು, ನವೆಂಬರ್ 12ರಿಂದ 15ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾಜಿ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್, ಮಾಜಿ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಕಳೆದ ಆಗಸ್ಟ್‌ನಲ್ಲೇ ‘ಕೆಎಸ್‌ಸಿಎ ಪುನರುಜ್ಜೀವನಕ್ಕೆ ಕರೆ’ಎಂಬ ಘೋಷಣೆಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, 2025-28ರ ಕೆಎಸ್‌ಸಿಎ ಆಡಳಿತ ಮಂಡಳಿಯ ಚುನಾವಣಾ ಕಣಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದರು. ಇದರ ಮುಂದುವರಿದ ಭಾಗವಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ ‘ಟೀಮ್ ಗೇಮ್ ಚೇಂಜರ್ಸ್‌’ ಎಂಬ ತಂಡದೊಂದಿಗೆ ಇತರ ಅಕಾಂಕ್ಷಿಗಳನ್ನು ಒಟ್ಟುಗೂಡಿಸಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. 
ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಸುಜಿತ್ ಸೋಮ್‌ಸುಂದರ್, ಅವಿನಾಶ್ ವೈದ್ಯ, ಮಾಜಿ ಕಾರ್ಯದರ್ಶಿ ಸಂತೋಷ್ ಮೆನನ್, ಬಿಎನ್ ಮಧುಕರ್, ಕಲ್ಪನಾ ವೆಂಕಟಚಾರ್, ಎವಿ. ಶಶಿಧರ್ ಹಾಗೂ ಎನ್‌ಎನ್ ಯುವರಾಜ್ ಬಣದ ಇತರ ಪ್ರಮುಖರೆನಿಸಿದ್ದಾರೆ. 
ಇವರ ಜತೆಗೆ ಬೆಂಗಳೂರು ವಲಯದ ಆರ್‌ಪಿ ನಾಗರಾಜ್, ವೀಕ್ಷಕ ವಿವರಣೆಕಾರ ಶ್ರೀನಿವಾಸ್ ಮೂರ್ತಿ, ಆಶಿಶ್ ಅಮರ್‌ಲಾಲ್ಲ, ಮೈಸೂರಿನ ಶ್ರೀನಿವಾಸ್ ಪ್ರಸಾದ್, ಶಿವಮೊಗ್ಗದ ನಾಗೇಂದ್ರ ಪಂಡಿತ್, ತುಮಕೂರಿನ ಹರೀಶ್ ಸಿಆರ್, ಧಾರವಾಡದ ಅಹಮದ್ ರಾಜಾ ಎ ಕಿತ್ತೂರ್, ರಾಯಚೂರಿನ ಪಾರ್ಥಸಾರಥಿ ಕನಕವಿಡು, ಮಂಗಳೂರಿನ ಡಾ.ಶ್ರೀಕಾಂತ್ ರೈ ಹಾಗೂ ಆಜೀವ ಸದಸ್ಯತ್ವ  ಹೊಂದಿರುವ ಶೈಲೇಶ್ ಪೌಲ್, ವಿಎಂ ಮಂಜುನಾಥ್ ಅವರು ಟೀಮ್ ಗೇಮ್ ಚೇಂಜರ್ಸ್‌ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. 56 ವರ್ಷದ ವೆಂಕಟೇಶ್ ಪ್ರಸಾದ್ 2013ರಿಂದ 2016ರ ಅವಧಿಯಲ್ಲಿ ಕೆಎಸ್‌ಸಿಎಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರೆ, 2019ರಿಂದ 2022ರ ಅವಧಿಯಲ್ಲಿ ಖಜಾಂಚಿಯಾಗಿ ವಿನಯ್ ಮೃತ್ಯುಂಜಯ ಸೇವೆ ಸಲ್ಲಿಸಿದ್ದಾರೆ. 
ಕುಂಬ್ಳೆ, ಶ್ರೀನಾಥ್ ಸಾಥ್
ರಾಜ್ಯದ ಪ್ರತಿಷ್ಠಿತ ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಜ್ಞರ ಶಿಫಾರಸುಗಳನ್ನು ಆಧರಿಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಶ್ವ ದರ್ಜೆಗೇರಿಸಿ, ಮರಳಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸುವಂತೆ ಮಾಡುವುದು ವೆಂಕಟೇಶ್ ಪ್ರಸಾದ್ ಬಣದ ಪ್ರಮುಖ ಧ್ಯೇಯವಾಗಿದೆ. ಈ ಬಣಕ್ಕೆ ಭಾರತ ತಂಡದ ಮಾಜಿ ನಾಯಕ-ಕೋಚ್ ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗ ಹಾಗೂ ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ಭಾರತ ಮಹಿಳಾ ತಂಡದ ನಾಯಕಿ ಶಾಂತಾ ರಂಗಸ್ವಾಮಿ ತನ್ನ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ರಾಜ್ಯದ ಹಲವು ಮಾಜಿ-ಹಾಲಿ ಕ್ರಿಕೆಟಿಗರು ಜತೆಗಿರುವುದಾಗಿ ತಿಳಿಸಿದ್ದಾರೆ.
ಟೀಮ್ ಗೇಮ್ ಚೇಂಜರ್ಸ್‌ ಯೋಜನೆ
*ರಾಜ್ಯದಲ್ಲಿ ಕ್ರಿಕೆಟ್‌ಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು 
*ಚಿನ್ನಸ್ವಾಮಿ ಸ್ಟೇಡಿಯಂನ ಪ್ರೇಕ್ಷಕರ ಆಸನ ಸಾಮರ್ಥ್ಯ ಹೆಚ್ಚಳ 
*ಸಂಪೂರ್ಣ ಪಾರದರ್ಶಕವಾದ ಡಿಜಿಟಲ್ ಟಿಕೆಟ್ ವ್ಯವಸ್ಥೆ
*ಪ್ರತಿಭೆಗಳ ಗುರುತಿಸುವಿಕೆಗೆ ಎಲ್ಲ ವಲಯಗಳಲ್ಲಿ ಅಕಾಡೆಮಿ
*ಪುರುಷ ಕ್ರಿಕೆಟರ್ ಜತೆಗೆ ಮಹಿಳೆಯರಿಗೂ ಸಮಾನ ಗೌರವ 
*ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಆದ್ಯತೆ 
*ಎಸ್‌ಸಿಎ ಮಾದರಿಯಲ್ಲಿ ರಾಜ್ಯದ ಉದಯೋನ್ಮುಖ ಆಟಗಾರರಿಗೆ ಮೂಲ ಸೌಕರ್ಯ
*ಆಲೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಕ್ರೀಡಾಂಗಣಗಳ ಪುನಶ್ಚೇತನ
*ಮೈಸೂರಿನಲ್ಲಿ ವಿಶ್ವ ದರ್ಜೆಯ ಕ್ರೀಡಾಂಗಣಕ್ಕೆ ಚಾಲನೆ, ಇತರ ನಗರಗಳಿಗೂ ಸೌಲಭ್ಯ ವಿಸ್ತರಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net