ಬೆಂಗ್ಳೂರಲ್ಲೀಗ ಜೊಂಬಿ ಅಮಲು: ಗಂಟೆಗಟ್ಟಲೆ ನಿಂತಲ್ಲೇ ನಿಲ್ಲುವಷ್ಟು ನಶೆ, ಹೊಸ ಡ್ರಗ್ಸ್ ಹಂಚಿಕೆ ಆತಂಕ! Zombie Drug

ಬೆಂಗ್ಳೂರಲ್ಲೀಗ ಜೊಂಬಿ ಅಮಲು: ಗಂಟೆಗಟ್ಟಲೆ ನಿಂತಲ್ಲೇ ನಿಲ್ಲುವಷ್ಟು ನಶೆ, ಹೊಸ ಡ್ರಗ್ಸ್ ಹಂಚಿಕೆ ಆತಂಕ! Zombie Drug
ಬೆಂಗ್ಳೂರಲ್ಲೀಗ ಜೊಂಬಿ ಅಮಲು: ಗಂಟೆಗಟ್ಟಲೆ ನಿಂತಲ್ಲೇ ನಿಲ್ಲುವಷ್ಟು ನಶೆ, ಹೊಸ ಡ್ರಗ್ಸ್ ಹಂಚಿಕೆ ಆತಂಕ! Zombie Drug
Published on

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಶುಚಿಕಿತ್ಸೆಯ ಕ್ಸಿಲಾಜಿನ್ ಮಾದಕ ವಸ್ತುವಾಗಿ ಬಳಕೆ ಆಗುತ್ತಿರುವ ಶಂಕೆ
  • ಬಾಗಲೂರು ಕಾಲೇಜು ಬಳಿ ಯುವಕ ಗಂಟೆಗಟ್ಟಲೆ ನಿಂತಲ್ಲೇ ನಿಂತಿರುವ ವಿಡಿಯೋ ವೈರಲ್
  • ಫೆಂಟನಿಲ್ ಅಥವಾ ಮದ್ಯದೊಂದಿಗೆ ಬೆರೆಸಿ ಸೇವಿಸಿದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು
  • ವೀಸಾ ಅವಧಿ ಮುಗಿದ ವಿದೇಶಿಗರಿಂದಲೇ ಈ ದಂಧೆ ನಡೆಯುತ್ತಿರುವ ಅನುಮಾನ
  • ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗುತ್ತಿದ್ದರೂ, ಹೊಸ ಮಾದರಿಯ ನಶೆ ತಡೆಗೆ ಪೊಲೀಸರ ಕಸರತ್ತು
ಬೆಂಗಳೂರು: ಹೈಡ್ರೋಗಾಂಜಾ, ಸಿರಂಜ್ ಡ್ರಗ್ಸ್, ಎಂಡಿಎಂ ಸೇರಿ ಹಲವು ಮಾದಕ ವಸ್ತುಗಳು ಈಗಾಗಲೇ ಯುವಪೀಳಿಗೆಗೆ ಮತ್ತೇರಿಸುತ್ತಿರುವ ಆತಂಕದ ನಡುವೆ ಇದೀಗ ಅತ್ಯಧಿಕ ನಶೆ ಏರಿಸಿ ಗಂಟೆಗಟ್ಟಲೆ ನಿಂತಲ್ಲೇ ನಿಲ್ಲುವಂತೆ ಮಾಡುವ ಹೊಸ ಜೊಂಬಿ ಡ್ರಗ್ಸ್ ( Zombie Drug ) ಎಂದು ಕರೆಯುವ ಕ್ಸಿಲಾಜಿನ್ ಚಲಾವಣೆಗೆ ಬಂದಿರುವ ಭೀತಿ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಯುವಕನ ವಿಡಿಯೋವೊಂದು ತೀವ್ರ ಆತಂಕ ಸೃಷ್ಟಿಸಿದೆ.
ರಾಜಧಾನಿಗೆ ಕಳ್ಳದಾರಿಯಲ್ಲಿ ನಿತ್ಯ ನೂರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ಸರಬರಾಜಾಗುತ್ತಿದೆ. ನಿಯಂತ್ರಣಕ್ಕೆ ಪೊಲೀಸ್ ಪಡೆ ಏನೆಲ್ಲ ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಇದರ ನಡುವೆ ಈಗ ಮತ್ತೊಂದು ಹೊಸ ಮಾದರಿಯ ಡ್ರಗ್ಸ್ ಕಾಲಿಟ್ಟಿರುವುದು ಸಾರ್ವಜನಿಕರು ಹಾಗೂ ಪೊಲೀಸರಿಗೆ ಇನ್ನಷ್ಟು ತಲೆನೋವು ತಂದಿದೆ.
ಮನುಷ್ಯನ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುವ ಜೊಂಬಿ ಡ್ರಗ್ಸ್ ಸೇವಿಸುವುದಕ್ಕೆ ಹಲವು ದೇಶಗಳಲ್ಲಿ ಸಂಪೂರ್ಣ ನಿಷೇಧವಿದೆ. ಆದರೆ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪೆಡ್ಲರ್ಸ್​ಗಳು ಯುವಕ-ಯುವತಿಯರನ್ನು ಗುರಿಯಾಗಿಸಿಕೊಂಡು ಜೊಂಬಿ ಮಾದರಿಯ ಡ್ರಗ್ಸ್ ಮಾರಾಟ ಮಾಡುತ್ತಿರುವ ಅನುಮಾನ ವ್ಯಕ್ತವಾಗಿದೆ.
ಒಂದೇ ಸ್ಥಳದಲ್ಲಿ ನಿಲ್ಲಿಸುತ್ತೆ!: ಅಪಾಯಕಾರಿ ಡ್ರಗ್ಸ್ ಸೇವನೆ ಮಾಡಿರುವ ಯುವಕನೊಬ್ಬ, ಬಾಗಲೂರು ಪ್ರದೇಶದ ಕಾಲೇಜೊಂದರ ಬಳಿ ನಶೆಯ ಲೋಕದಲ್ಲಿ ತೇಲುತ್ತಾ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊಂಬಿ ಡ್ರಗ್ಸ್ ಸೇವನೆ ಮಾಡಿರುವ ವ್ಯಕ್ತಿ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ನಿಂತುಬಿಡುತ್ತಾನೆ. ಮೈ ಮೇಲೆ ಪ್ರಜ್ಞೆ ಇಲ್ಲದ ಸ್ಥಿಯಲ್ಲಿರುವ ವ್ಯಕ್ತಿ ಅರೆಪ್ರಜ್ಞಾಸ್ಥಿತಿಯಲ್ಲಿ ಇರುವ ಕೆಲ ವಿಡಿಯೋಗಳು ಸಾರ್ವಜನಿಕರು ಭಯಪಡುವಂತೆ ಮಾಡಿವೆ.
ಸಿಗದ ನಿಯಂತ್ರಣ: ನಗರದಲ್ಲಿ ವಿದೇಶಿಗರು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿರುವ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಬಾರದಂತಾಗಿದೆ. 2 ದಿನದ ಹಿಂದೆ ಹೆಬ್ಬಗೋಡಿಯಲ್ಲಿ ವಿದೇಶಿ ಪೆಡ್ಲರ್ ಬಳಿ ಪೊಲೀಸರು 27.42 ಕೋಟಿ ರೂ.ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ್ದರು. ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಕುಖ್ಯಾತ ಪೆಡ್ಲರ್​ನನ್ನು ಬಂಧಿಸಲಾಗಿತ್ತು. ಹೀಗೆ ನಗರದಲ್ಲಿ ವಾಸವಾಗಿರುವ ಬಹುತೇಕ ವಿದೇಶಿಗರು ವೀಸಾ ಅವಧಿ ಮುಕ್ತಾಯಗೊಂಡಿದ್ದರೂ, ಇಲ್ಲಿಯೇ ಇದ್ದು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾರೆ.

ಆತಂಕ ಏಕೆ?

ತಜ್ಞರ ಪ್ರಕಾರ ಕ್ಸಿಲಾಜಿನ್ ಎಂಬ ಡ್ರಗ್ಸ್ ಮಾದರಿಯ ಔಷಧವನ್ನು ಸಾಮಾನ್ಯವಾಗಿ ಪಶುಚಿಕಿತ್ಸೆಗಳಿಗೆ ಬಳಕೆ ಮಾಡುತ್ತಾರೆ. ಪಶುಗಳಿಗೆ ಜೊಂಬಿ ಚುಚ್ಚು ಮದ್ದು ನೀಡುವುದರಿಂದ ಅವುಗಳು ಹೆಚ್ಚು ಸಮಯದವರೆಗೆ ನಿದ್ರೆಗೆ ಜಾರುತ್ತವೆ. ಇದನ್ನು ಮಾನವರು ಬಳಸಲು ಯೋಗ್ಯವಲ್ಲ. ಇದನ್ನು ಕೆಲವೊಮ್ಮೆ ಇತರ ಔಷಧಗಳೊಂದಿಗೆ (ಮುಖ್ಯವಾಗಿ ಫೆಂಟನಿಲ್) ಬೆರೆಸಿ ಇತರ ಕಾಯಿಲೆಗಳಿಗೆ ನೀಡಲಾಗುತ್ತದೆ. ಆದರೆ, ಇತ್ತೀಚೆಗೆ ಕೆಲವರು ಇದನ್ನು ಡ್ರಗ್ಸ್ ಔಷಧಗಳೊಂದಿಗೆ ಬೆರೆಸಿ ಹೆಚ್ಚು ನಶೆ ಬರುವಂತೆ ಮಾಡುತ್ತಿದ್ದಾರೆ. ಇದನ್ನು ಫೆಂಟನಿಲ್ ಅಥವಾ ಬೆಂಜೊಡಿಯ ಜೆಪೈನ್​ಗಳೊಂದಿಗೆ ಬೆರೆಸಿದಾಗ ಅಥವಾ ಆಲ್ಕೋಹಾಲ್​ನೊಂದಿಗೆ ಬೆರೆಯಿಸಿ ಮಿತಿಮೀರಿ ಸೇವನೆ ಮಾಡಿದಾಗ ಸಾವು ಕೂಡ ಸಂಭವಿಸಬಹುದು.

ಹಲವು ಮಾದರಿಯ ಡ್ರಗ್ಸ್ ಇವೆ. ಆದರೆ, ಈ ಜೊಂಬಿ ಬಗ್ಗೆ ಮಾಹಿತಿ ಇಲ್ಲ. ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಬಗ್ಗೆ ಪರಿಶೀಲನೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net