ಆತ್ಮಹತ್ಯೆಗೆ ಪ್ರಚೋದಿಸಿದ ಯುವಕನನ್ನು ಬಂಧಿಸಿ

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಯುವಕನನ್ನು ಬಂಧಿಸುವಂತೆ ಆಗ್ರಹಿಸಿ ಸಿಂದಗಿ ನಗರದ ಪೊಲೀಸ್ ಠಾಣೆ ಎದುರು ಆತ್ಮಹತ್ಯೆಗೆ ಶರಣಾಗಿದ್ದ ಯುವತಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಯುವಕನನ್ನು ಬಂಧಿಸುವಂತೆ ಆಗ್ರಹಿಸಿ ಸಿಂದಗಿ ನಗರದ ಪೊಲೀಸ್ ಠಾಣೆ ಎದುರು ಆತ್ಮಹತ್ಯೆಗೆ ಶರಣಾಗಿದ್ದ ಯುವತಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂತ್ರಸ್ತ ಕುಟುಂಬಸ್ಥರು, ಬಂದಾಳ ಗ್ರಾಮಸ್ಥರಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
  • ಪ್ರಕರಣದಲ್ಲಿ ರಾಜಕೀಯ ಒತ್ತಡದ ಆರೋಪ
  • ಶೀಘ್ರವೇ ಆರೋಪಿಯನ್ನು ಬಂಧಿಸುವ ಭರವಸೆ
ಸಿಂದಗಿ: ಕಳೆದ ಏ. 12ರಂದು ನಡೆದ ಯುವತಿ ಆತ್ಮಹತ್ಯೆಗೆ ಪ್ರಚೋದಿಸಿದ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿ ಮಂಗಳವಾರ ಮೃತ ಯುವತಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ಮಹಿಳೆಯರು, ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಸಿಂದಗಿ ಠಾಣೆಗೆ ಮುತ್ತಿಗೆ ಹಾಕಿ ಕೆಲಕಾಲ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಬಂದಾಳ ಗ್ರಾಮದ ಜಯಶ್ರೀ ಬಿರಾದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಾಯಿ ಸಾವಿತ್ರಿ ತಮ್ಮ ಮಗಳ ಸಾವಿಗೆ ಅದೇ ಗ್ರಾಮದ ಶ್ರೀಶೈಲ ಬಡಾನೂರ ಪ್ರಚೋದನೆಯೇ ಕಾರಣ ಎಂದು ಸೋಮವಾರ ಪ್ರಕರಣ ದಾಖಲಿಸಿದ್ದರು.
ಕೆಲವು ಗ್ರಾಮಸ್ಥರು, ಮುಖಂಡರು ಮಾತನಾಡಿ, ಘಟನೆ ನಡೆದು ಮೂರು ದಿನವಾಗಿದೆ. ಪೊಲೀಸರು ಆರೋಪಿಯ ತಾಯಿ ಹಾಗೂ ತಂದೆಯನ್ನು ಠಾಣೆಗೆ ಕರೆದು ಕೂರಿಸಲಾಗಿದೆ ಎಂದು ಹೇಳಿದ್ದರು. ಆದರೆ ರಸ್ತೆ ಮಧ್ಯದಲ್ಲಿಯೇ ಯಾರೋ ಫೋನ್ ಮಾಡಿದ್ದಾರೆ. ಅದಕ್ಕೆ ಶ್ರೀಶೈಲನ ತಾಯಿಯನ್ನು ಬಿಟ್ಟು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ.
ಇದರಲ್ಲಿ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು.
ಏ. 27ಕ್ಕೆ ಮದುವೆ ಮಾಡುವ ಸಲುವಾಗಿ ಬಡತನದಲ್ಲಿಯೇ ಬಟ್ಟೆ ಸಂತೆ ಮಾಡಿದ್ದ ಕುಟುಂಬ ಇಂದು ಕಣ್ಣೀರು ಹಾಕುತ್ತಿದೆ. ಇಂತಹ ಸಮಸ್ಯೆಗಳು ಊರ ಮನೆಗಳಿಗೂ ಬರಬಹುದು. ಇಂತಹವರನ್ನು ರಸ್ತೆಯಲ್ಲಿ ಚಪ್ಪಲಿ ಸೇವೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆರೋಪಕ್ಕೆ ಉತ್ತರಿಸಿದ ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ ಮಾತನಾಡಿ, ಆರೋಪಿಯನ್ನು ವಶಕ್ಕೆ ಪಡೆಯಲು ಪ್ರಯತ್ನ ಮಾಡಿದ್ದೇವೆ.
ಈ ಬಗ್ಗೆ ಸುಖಾಸುಮ್ಮನೆ ಆರೋಪಿಸುವುದು ಒಳ್ಳೆಯದಲ್ಲ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಸಿಪಿಐ ಭರವಸೆ ಅನುಸಾರ ಮತಳ ಕುಟುಂಬಸ್ಥರು, ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.
ಗಾಣಿಗೇರ ಸಮಾಜದ ಅಧ್ಯಕ್ಷ ನಂದು ಗಡಗಿ, ಯುವ ಮುಖಂಡ ರಾಕೇಶ ಕಲ್ಲೂರ, ಎಸ್‌ಡಿಎಂಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ, ಶ್ರೀಶೈಲ ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಓಲೇಕಾರ, ಶಿವುಕುಮಾರ ನಾಟೀಕಾರ, ಗೊಲ್ಲಾಳಪ್ಪ ಮುರಗಾನೂರ, ಜಗನ್ನಾತ ದೇವರಮನಿ, ನಾಗಪ್ಪ ನಿಂಗಪ್ಪ ಬಿರಾದಾರ ಸೇರಿ ಮತಳ ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ಮಹಿಳೆಯರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net