ಎಲ್‌ನೀನೊ ಪ್ರಭಾವ ವಿಶ್ವವನ್ನೇ ವ್ಯಾಪಿಸಿ ಮಳೆ ಕೊರತೆಯನ್ನುಂಟು ಮಾಡುತ್ತಿರುವಂತೆಯೇ ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕೊರತೆ ಕೃಷಿಕರು ಮತ್ತು ಸಾರ್ವಜನಿಕ ವಲಯದಲ್ಲಿ ಆತಂಕ ತಂದೊಡ್ಡಿದೆ. ಒಂದಡೆ ಮಳೆರಾಯನ ಅವಕೃಪೆಗೆ ಜನರು ಒಳಗಾಗಿದ್ದು, ಎಲ್‌ನೀನೊ ಪರಿಣಾಮ ಈ ಬಾರಿ ಮಳೆ ಕೊರತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪರಿಣಾಮ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರವಾಗಬಹುದೆನ್ನುವ ಭೀತಿ ಕಾಡುತ್ತಿದೆ. ತಾಲೂಕಿನಲ್ಲಿ ಮೇ ತಿಂಗಳಾಂತ್ಯಕ್ಕೆ 111.2 ಮಿ.ಮೀಟರ್ ಮಳೆಯಾಗಿದ್ದು, ವಾಡಿಕೆ ಮಳೆ 241 ಮಿ.ಮೀ.ಆಗಿದ್ದು ಶೇ.54 ಪ್ರಮಾಣದ ಕೊರತೆ ಕಾಡುತ್ತಿದೆ. ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಶೇ.57ರಷ್ಟು ಕೊರತೆಯಾಗಿದ್ದರೆ, ಬಿಳಿಕೆರೆ ಹೋಬಳಿಯಲ್ಲಿ ಶೇ.34, ಗಾವಡಗೆರೆಯಲ್ಲಿ ಶೇ.64, ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಶೇ.64ರಷ್ಟು ಕೊರತೆ ಉಂಟಾಗಿದೆ.