ಭ್ರಷ್ಟಾಚಾರ, ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಗಳಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ), ಹೆಚ್ಚುವರಿ ಅಬಕಾರಿ ಆಯುಕ್ತ ವೈ.ಡಿ.ಮಂಜುನಾಥ್ ಅವರ ನಿವಾಸ, ವಾಹನ ಚಾಲಕ, ಕುಟುಂಬದ ಸದಸ್ಯರು ಹಾಗೂ ಅವರ ಆಪ್ತರಿಗೆ ಸೇರಿದ ವಿವಿಧ ನಿವಾಸ ಮತ್ತು ಕಚೇರಿಗಳ ಮೇಲೆ ನಡೆಸಿದ್ದ ದಾಳಿಯಲ್ಲಿ 5.5 ಕೋಟಿ ರೂ.ನಗದು ಸೇರಿ 13.35 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹೇಗೆಲ್ಲಾ ಭ್ರಷ್ಟಾಚಾರ ನಡೆಸಿ ಅಕ್ರಮವಾಗಿ ಹಣ ಮಾಡುತ್ತಿರುವುದು ಪತ್ತೆಯಾಯಿತು. ಲಂಚ ವಸೂಲಿ, ಮನಿ ಲಾಂಡರಿಂಗ್ಗಾಗಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನೊಳಗೊಂಡ ಸಂಘಟಿತ ಜಾಲವೇ ಸಕ್ರಿಯವಾಗಿತ್ತು. ಮಾಸಿಕ ಲಂಚದ ವ್ಯವಸ್ಥೆ, ಕುಟುಂಬದವರ ಹೆಸರಲ್ಲಿ ಮದ್ಯದ ವ್ಯಾಪಾರ ಸೇರಿ ಇತರ ಅಕ್ರಮಗಳು ಬಯಲಾಯಿತು. ವಿವಿಧ ಮದ್ಯದ ಅಂಗಡಿಗಳಿಂದ ಕ್ಷೇತ್ರ ಅಧಿಕಾರಿಗಳಿಗೆ ಪ್ರತಿ ತಿಂಗಳು ನಿಗದಿತ ಲಂಚದ ಹಣ ಸಂದಾಯವಾಗುತ್ತಿರುವುದು, ಪರವಾನಗಿ ನವೀಕರಣ, ಸ್ಥಳಾಂತರ ಮತ್ತು ಹೊಸ ಲೈಸೆನ್ಸ್ ನೀಡುವಾಗ ಸಂಗ್ರಹವಾಗುವ ಈ ಲಂಚದ ಹಣವನ್ನು ಮಧ್ಯವರ್ತಿಗಳ ಮೂಲಕ ಒಂದೆಡೆ ಸೇರಿಸಿ ಹಂಚಿಕೆ ಮಾಡಲಾಗುತ್ತಿರುವುದು ಇಡಿ ತನಿಖೆಯಲ್ಲಿ ಕಂಡುಬಂದಿದೆ.