

ಕಾಡಿನೊಳಗೆ ಗಂಭೀರವಾಗಿ ಹೆಜ್ಜೆ ಹಾಕುತ್ತಾ, ಆಗಾಗ ಘೀಳಿಡುತ್ತಾ ಘೀಳಿಡುವಿಕೆ... ನೀರಿನಲ್ಲಿ ಸ್ವಚ್ಚಂದವಾಗಿ ತಂಟಾಟವಾಡುವ ಗಜಪರಿವಾರವನ್ನು ನೋಡುವುದೋ ಒಂದು ಸೊಗಸು... ಆದರೆ ಇದೆ ಆನೆ ಹಿಂಡು ಕಾಡಿನ ಗಡಿ ದಾಟಿ ನಾಡಿಗೆ ಬಂದರೆ ಕಥೆಯೇ ಬದಲು! ಬೆಳೆ ನಾಶ, ಜೀವ ಹಾನಿಯಂತ ಗಂಡಾಂತರಗಳು ಎದುರಾಗಬಹುದು. ಮಾನವ-ಆನೆ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ.
ಆಗಾಗ ಕಾಡು ದಾಟಿ ಬರುವ ಗಜಪಡೆ ವಿದ್ಯುತ್ ಬೇಲಿ, ರೈಲು ಮಾರ್ಗಗಳಲ್ಲಿ ಸಿಲುಕಿ ಸಾವಿಗೀಡಾಗುತ್ತಿವೆ. ಆದರೆ ಆನೆ ನಾಡಿಗೆ ಬಂತು ಎಂಬ ದೃಷ್ಟಿಯಿಂದ ನೋಡುವುದಕ್ಕಿಂತ, ಕಾಡು, ಕಾರಿಡಾರ್, ಆಹಾರ, ನೀರು, ಕೃಷಿ, ಅಭಿವೃದ್ಧಿ ಮತ್ತು ಮಾನವನ ವಿಸ್ತಾರದ ಬದುಕು... ಹೀಗೆ, ಇವೆಲ್ಲದರ ನಡುವೆ ಆನೆ ನಡೆಸುತ್ತಿರುವ ಸಂಘರ್ಷ ಎಂದು ನಾವು ಅರ್ಥಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲೇ ವಿಶ್ವ ಆನೆ ದಿನ ಮತ್ತಷ್ಟು ಮಹತ್ವ ಪಡೆಯುತ್ತದೆ. ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಎಲಿಫೆಂಟ್ ಫೌಂಡೇಷನ್ ವನ್ಯಜೀವಿ ಸಂಸ್ಥೆಯು 2012ರಿಂದ ಆಗಸ್ಟ್ 12ರಂದು ವಿಶ್ವ ಗಜದಿನ ಎಂದು ಆಚರಿಸುತ್ತಾ ಬಂದಿದೆ. 2016ರಿಂದ ಭಾರತದಲ್ಲೂ ಆನೆ ದಿನ ಆಚರಿಸಲಾಗುತ್ತಿದೆ. 2010ರಲ್ಲಿ ಭಾರತ ಸರ್ಕಾರ ಆನೆಗಳನ್ನು ಪಾರಂಪರಿಕ ಪ್ರಾಣಿ ಎಂದು ಘೋಷಿಸಿದೆ.
ಆನೆ ಅರಣ್ಯದ ಪರಿಸರ ವ್ಯವಸ್ಥೆಯನ್ನು ರೂಪಿಸುವ ಪ್ರಮುಖ ಜೀವಿಗಳಲ್ಲಿ ಒಂದು. ಅದಕ್ಕಾಗಿಯೇ ಆನೆಯನ್ನು ಕಾಡಿನ ಇಂಜಿನಿಯರ್ ಅಥವಾ ಕಾಡಿನ ತೋಟಗಾರ ಎಂದರೆ ತಪ್ಪಾಗಲಾರದು. ಆನೆಗಳು ಹಣ್ಣು, ಬೀಜ, ಎಲೆ, ಕೊಂಬೆ, ತೊಗಟೆ ಸೇರಿ ಅಪಾರ ಪ್ರಮಾಣದ ಸಸ್ಯಾಹಾರ ಸೇವಿಸುತ್ತವೆ. ಒಂದು ಪ್ರದೇಶದಲ್ಲಿ ಆಹಾರ ಸೇವಿಸಿ ಹಲವು ಕಿಲೋಮೀಟರ್ ದೂರ ಸಂಚರಿಸುವಾಗ ಅವುಗಳ ಮಲದ ಮೂಲಕ ಬೀಜಗಳು ಬೇರೆ ಬೇರೆ ಪ್ರದೇಶಗಳಿಗೆ ಹರಡುತ್ತವೆ. ಇದು ಅರಣ್ಯದ ನೈಸರ್ಗಿಕ ಪುನರುತ್ಪಾದನೆಗೆ ನೆರವಾಗುತ್ತದೆ. ದೊಡ್ಡ ಮರಗಳನ್ನು ಉರುಳಿಸುವುದು, ದಟ್ಟ ಪೊದೆಗಳನ್ನು ತೆರವುಗೊಳಿಸುವುದು, ದಾರಿಗಳನ್ನು ರೂಪಿಸುವುದು ಹಾಗೂ ನೀರಿನ ಮೂಲಗಳನ್ನು ಬಳಸುವುದು ಸೇರಿ ಆನೆಗಳ ಸಹಜ ಚಟುವಟಿಕೆಗಳು ಅರಣ್ಯದ ರಚನೆ ಮೇಲೆಯೇ ಪರಿಣಾಮ ಬೀರುತ್ತವೆ. ಹೀಗಾಗಿ ಆನೆಗಳ ಚಲನವಲನದಿಂದ ಅನೇಕ ಸಸ್ಯಗಳು ಹಾಗೂ ಇತರ ವನ್ಯಜೀವಿಗಳಿಗೆ ಪರೋಕ್ಷವಾಗಿ ಅನುಕೂಲವಾಗುತ್ತದೆ.
ಕರ್ನಾಟಕದ ಭೌಗೋಳಿಕ ಹಾಗೂ ಅರಣ್ಯ ಪರಿಸರ ಆನೆಗಳಿಗೆ ಅನುಕೂಲವಾಗಿದೆ. ಪಶ್ಚಿಮಘಟ್ಟದ ಪ್ರಮುಖ ಅರಣ್ಯ ಪ್ರದೇಶಗಳು, ಹುಲ್ಲುಗಾವಲು, ನೀರಿನ ಮೂಲಗಳು ಮತ್ತು ವಿವಿಧ ಸಸ್ಯ ಸಂಪತ್ತು ಆನೆಗಳಿಗೆ ಉತ್ತಮ ವಾಸಸ್ಥಳ ಒದಗಿಸಿವೆ. ವಿಶೇಷವಾಗಿ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆ ಒಳಗೊಂಡಿರುವ ನಾಗರಹೊಳೆ, ಬಂಡೀಪುರ ಭೂಪ್ರದೇಶ ದೇಶದ ಪ್ರಮುಖ ಆನೆ ಆವಾಸ ಪ್ರದೇಶವಾಗಿದೆ.
ನಮ್ಮ ಏಷ್ಯನ್ ಆನೆ ಆಫ್ರಿಕನ್ ಆನೆಗಿಂತ ಗಾತ್ರದಲ್ಲಿ ಚಿಕ್ಕದಾದರೂ ಬುದ್ಧಿವಂತಿಕೆಯಲ್ಲಿ ವಿಶಿಷ್ಟವಾಗಿದೆ. ಹೆಣ್ಣು ಆನೆಯ ನೇತೃತ್ವದಲ್ಲಿ ಕುಟುಂಬ ಜೀವನ ನಡೆಸುವ ಈ ಪ್ರಾಣಿಗಳು ಪರಸ್ಪರ ಸಂವಹನ, ಸಹಕಾರ ಮತ್ತು ಸಾಮಾಜಿಕ ಬಾಂಧವ್ಯಕ್ಕೆ ಹೆಸರುವಾಸಿಯಾಗಿವೆ. ಒಂದು ಹಿಂಡಿನಲ್ಲಿ ಸಾಮಾನ್ಯವಾಗಿ ಹಲವು ತಲೆಮಾರಿನ ಆನೆಗಳು ಒಟ್ಟಿಗೆ ವಾಸಿಸುವುದನ್ನು ಕಾಣಬಹುದು.
ಏಷ್ಯಾದಲ್ಲಿ ಅತಿ ಹೆಚ್ಚು ಆನೆ ಸಂತತಿಯನ್ನು ಹೊಂದಿರುವ ಖ್ಯಾತಿ ಭಾರತಕ್ಕಿದೆ. ಈ ಪೈಕಿ ದೇಶದಲ್ಲೇ ಕರ್ನಾಟಕ ಪಾಲು ದೊಡ್ಡದು ಎನ್ನುವುದು ಹೆಮ್ಮೆಯ ಸಂಗತಿ. ದೇಶದಲ್ಲಿ ಒಟ್ಟು 22,446 ಆನೆಗಳಿದ್ದು, ಈ ಪೈಕಿ ರಾಜ್ಯದಲ್ಲಿ 6,013 ಆನೆಗಳಿವೆ. ಉಳಿದಂತೆ ಅಸ್ಸಾಂ (4,159), ತಮಿಳುನಾಡು (3,136), ಕೇರಳ(2,785), ಉತ್ತರಾಖಂಡ(1,792), ಒಡಿಶಾ(912), ಪಶ್ಚಿಮ ಬಂಗಾಳ(707) ಹೆಚ್ಚು ಆನೆಗಳನ್ನು ಹೊಂದಿವೆ. ರಾಜ್ಯದ ನಾಗರಹೊಳೆ, ಬಂಡೀಪುರ, ಆರ್ಟಿ, ಕಾವೇರಿ ವನ್ಯಜೀವಿ ಅಭಯಾರಣ್ಯ, ಮಹದೇಶ್ವರ ಬೆಟ್ಟ, ಭದ್ರಾ ಪ್ರಮುಖ ಆವಾಸ ಸ್ಥಾನಗಳಾಗಿವೆ.
ಆನೆಗಳು ತಲೆಮಾರುಗಳಿಂದ ಬಳಸಿಕೊಂಡು ಬಂದ ಸಂಚಾರ ಮಾರ್ಗಗಳೇ ಕಾರಿಡಾರ್ಗಳು. ಇಲ್ಲಿ ಮನೆ, ಕೃಷಿ, ರಸ್ತೆ, ರೈಲು, ರೆಸಾರ್ಟ್ ಸೇರಿ ನಾನಾ ಅಭಿವೃದ್ಧಿಯ ಕಾರಣ ಆನೆಗಳ ಸಹಜ ಸಂಚಾರಕ್ಕೆ ತಡೆ ಉಂಟಾಗುತ್ತದೆ. ಹಾಗಾಗಿ ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಆಸ್ತಿ ನಷ್ಟ ಮತ್ತು ಕೆಲವೊಮ್ಮೆ ಮಾನವ, ಆನೆಗಳ ಜೀವಹಾನಿ ಸಂಭವಿಸುತ್ತಿವೆ.
ಸಂಘರ್ಷ ಕಡಿಮೆ ಮಾಡಲು ಆನೆ ಕಾರಿಡಾರ್ನಲ್ಲಿ ಒತ್ತುವರಿ ತೆರವು ಮಾಡಬೇಕಿದೆ. ಕಾರಿಡಾರ್ಗಳಿಗೆ ಅನನುಕೂಲ ಆಗುವ ಯಾವುದೇ ಯೋಜನೆಯನ್ನು ಜಾರಿ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಜಿಪಿಎಸ್ ಕಾಲರ್, ಡ್ರೋನ್, ಕ್ಯಾಮರಾ ಟ್ರ್ಯಾಪ್, ಎಐ ಆಧಾರಿತ ನಿಗಾ ವ್ಯವಸ್ಥೆ ಹಾಗೂ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಬಳಸುತ್ತಿದೆ. ಆನೆಗಳು ಕಾಡಿನಿಂದ ಹೊರ ಬಂದಾಗ ಗ್ರಾಮಗಳಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸುವ ವ್ಯವಸ್ಥೆಯನ್ನು ಎಲ್ಲೆಡೆ ವಿಸ್ತರಿಸಬೇಕು.
ಮಾನವ-ಆನೆ ಸಂಘರ್ಷ ತಗ್ಗಿಸಲು ಕರ್ನಾಟಕದಲ್ಲಿ ಬಳಸುತ್ತಿರುವ ಪ್ರಮುಖ ಭೌತಿಕ ತಡೆಗಳಲ್ಲಿ ರೈಲ್ವೆ ಕಂಬಿ ತಡೆಗೋಡೆ ಪ್ರಮುಖವಾಗಿದೆ. ರೈಲ್ವೆ ಕಂಬಿಗಳನ್ನು ಬಳಸಿಕೊಂಡು ಬಲಿಷ್ಠ ತಡೆ ನಿರ್ವಿುಸಲಾಗುತ್ತದೆ. ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿ ಇದರಿಂದ ಆನೆಗಳ ಗ್ರಾಮ ಪ್ರವೇಶವನ್ನು ತಡೆಯಬಹುದಾಗಿದೆ. 2025ರ ಅಂತ್ಯದ ವೇಳೆಗೆ ರಾಜ್ಯದಲ್ಲಿ ಸುಮಾರು 428 ಕಿ.ಮೀ. ತಡೆಗೋಡೆ ನಿರ್ವಿುಸಲಾಗಿದ್ದು, ಇದಕ್ಕಾಗಿ 264 ಕೋಟಿ ರೂ.ವೆಚ್ಚವಾಗಿದೆ ಎಂದು ಸರ್ಕಾರ ತಿಳಿಸಿದೆ. ಸೋಲಾರ್ ಬೇಲಿಗೂ 144 ಕೋಟಿ ರೂ. ವೆಚ್ಚ ಮಾಡಲಾಗಿದೆ.
ರಾಜ್ಯದ 20 ಅರಣ್ಯ ವಿಭಾಗ ಗಳಲ್ಲೂ ಇಲಾಖೆ ವತಿಯಿಂದ ಬುಧವಾರ ವಿಶ್ವ ಆನೆ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಸಾರ್ವ ಜನಿಕರಿಗೆ ಆನೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಂರಕ್ಷಣೆ ಉತ್ತೇಜಿಸುವ ಉದ್ದೇಶದಿಂದ ಆ.12ರಂದು ಆನೆಗಳು ಇರುವ ವನ್ಯ ಧಾಮಗಳಲ್ಲಿ ಆಚರಣೆ ಮಾಡಲಾಗುತ್ತಿದೆ.
ಆನೆಗಳು ಇದ್ದರೆ ಮಾತ್ರ ಕಾಡು ಜೀವಂತ ಎನಿಸಿಕೊಳ್ಳುತ್ತದೆ. ಆನೆಗಳು ರಾತ್ರಿ ವೇಳೆ ಜಮೀನಿನೊಳಗೆ ಪ್ರವೇಶಿಸುವಾಗ ವಿದ್ಯುತ್ ಹರಿಯುವ ಬೇಲಿಯನ್ನು ರ್ಸ³ಸಿದರೆ ಸ್ಥಳದಲ್ಲೇ ಕುಸಿದು ಬೀಳುವ ಅಪಾಯವಿದೆ. ಮತ್ತೊಂದೆಡೆ ತಗ್ಗಿದ ವಿದ್ಯುತ್ ತಂತಿಗಳು, ತುಂಡಾಗಿ ನೆಲಕ್ಕೆ ಬಿದ್ದಿರುವ ತಂತಿಗಳು ಮತ್ತು ವಿದ್ಯುತ್ ಮಾರ್ಗಗಳ ನಿರ್ವಹಣೆಯ ಕೊರತೆಯೂ ಅಪಾಯ ಉಂಟುಮಾಡಬಹುದು. ಹಾಗಾಗಿ, ಆನೆ ಸಂಚಾರವಿರುವ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗಗಳ ನಿಯಮಿತ ಪರಿಶೀಲನೆ, ತಗ್ಗಿರುವ ತಂತಿಗಳ ದುರಸ್ತಿ, ಅಕ್ರಮ ವಿದ್ಯುತ್ ಸಂಪರ್ಕಗಳ ವಿರುದ್ಧ ಕಠಿಣ ಕ್ರಮ, ಸುರಕ್ಷಿತ ಸೋಲಾರ್ ಬೇಲಿ ಅಳವಡಿಕೆ ಮೂಲಕ ಎಚ್ಚರ ವಹಿಸಬೇಕಿದೆ.
| ಕೆ.ಎಸ್.ಸುಧೀರ್ ವನ್ಯಜೀವಿ ತಜ್ಞ