ಗ್ರಾಮೀಣ ಸರ್ಕಾರಿ ಶಾಲೆ ಉಳಿಸಲು ಶ್ರಮಿಸಿ

Work hard to save rural government schools
Work hard to save rural government schools
Published on
ಗೌರಿಬಿದನೂರು: ಜನವಿರೋಧಿ ಕೆಪಿಎಸ್​ ಮ್ಯಾಗ್ನೆಟ್​ ಯೋಜನೆ ಕೈಬಿಟ್ಟು ಗ್ರಾಮೀಣ ಸರ್ಕಾರಿ ಶಾಲೆಗಳ ಅಸ್ತಿತ್ವ ಉಳಿಸುವಂತೆ ಒತ್ತಾಯಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಹೊಸೂರು ಹೋಬಳಿಯ ವಿವಿಧ ಗ್ರಾಮಗಳ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್​ಚಂದ್ರ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ "ಕೆಪಿಎಸ್​ ಮ್ಯಾಗ್ನೆಟ್​ ಯೋಜನೆ'ಯು ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪಿತೂರಿಯಾಗಿದೆ. ಒಂದು ಗ್ರಾಪಂ ವ್ಯಾಪ್ತಿಯ 5ರಿಂದ 6 ಕಿ.ಮೀ. ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಕೆಪಿಎಸ್​ ಶಾಲೆಗೆ ವಿಲೀನ ಮಾಡುತ್ತಿದೆ. ತಾಲೂಕಿನ ಹೊಸೂರು, ಗುರುಪ್ಪನಹಳ್ಳಿ, ಭಕ್ತರಹಳ್ಳಿ, ಮುದುಗೆರೆ, ಹಳೇ ಉಪ್ಪಾರಹಳ್ಳಿ, ಬಂದರಹಳ್ಳಿ, ರಂಗಪ್ಪನಪಾಳ್ಯ ಸೇರಿ ಹಲವು ಶಾಲೆಗಳನ್ನು ಹೊಸೂರು ಕೆಪಿಎಸ್​ ಶಾಲೆಗೆ ವಿಲೀನಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಮಂಡಳಿ ಸದಸ್ಯ ತುಳಸಿ ಮಾತನಾಡಿ, ಹೊಸೂರು ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ಯೋಜನೆ ಕೈ ಬಿಡಬೇಕು. ಯಾವುದೇ ಕಾರಣಕ್ಕೂ ಒಂದೇ ಒಂದು ಸರ್ಕಾರಿ ಶಾಲೆಯನ್ನು ವಿಲೀನದ ಹೆಸರಿನಲ್ಲಿ ಮುಚ್ಚಬಾರದು. ಒತ್ತಾಯ ಪೂರ್ವಕವಾಗಿ ಯಾವುದೇ ಹಳ್ಳಿಯ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು, ಪ್ರತಿಸರ್ಕಾರಿ ಶಾಲೆಗೂ ಕಾಯಂ ಶಿಕ್ಷಕರನ್ನು ನೇಮಕ ಮಾಡಿ, ಸೌಕರ್ಯಗಳನ್ನು ಒದಗಿಸಿ ಬಲಪಡಿಸುವ ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಮುದುಗೆರೆ ತಿಮ್ಮಯ್ಯ ಮಾತನಾಡಿ, ಸರ್ಕಾರದ ಈ ನೀತಿಯು ತಂದೆ ಊಟ ಕೊಟ್ಟು ತಾಯಿ ತಟ್ಟೆ ಕಿದ್ಕೊಂಡಂತಿದೆ. ಒಂದು ಕೈಯಲ್ಲಿ ಉಚಿತ ಬಸ್​, ಹೈಟೆಕ್​ ಶಾಲೆ ಅಂತ ಆಸೆ ತೋರಿಸಿ, ಇನ್ನೊಂದು ಕೈಯಲ್ಲಿ ನಮ್ಮ ಕಣ್ಣಿದುರಿನ ಹಳ್ಳಿಯ ಶಾಲೆಯನ್ನೇ ಕಿತ್ತುಕೊಳ್ಳಲಾಗುತ್ತಿದೆ. ಈ ಪ್ರತಿಭಟನೆ ಆರಂಭವಷ್ಟೆ,ನಮ್ಮ ಕ್ಲಸ್ಟರ್​ ವ್ಯಾಪ್ತಿಯ ಯಾವುದೇ ಒಂದು ಶಾಲೆ ಮುಚ್ಚಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಉಳಿವಿಗೆ ಒತ್ತಾಯಿಸಿ ಬಿಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹಳೇಉಪ್ಪಾರಹಳ್ಳಿಯ ಸಿದ್ದರೆಡ್ಡಿ, ಅಜ್ಜಪ್ಪ, ಮಹಾಲಕ್ಷಿ$್ಮ, ಭಾರತಿ, ಬಂದರಹಳ್ಳಿಯ ಗಂಗಾಧರ, ಮಂಜುನಾಥ, ಗಂಗಾಧರ, ರಂಗಪ್ಪನಪಾಳ್ಯದ ರಂಗಸ್ವಾಮಿ, ನರಸಿಂಹ, ಗುರಪ್ಪನಹಳ್ಳಿಯ ಹನುಮಂತ, ಲೋಕೇಶ್​, ಭಕ್ತರಹಳ್ಳಿರಂಗಪ್ಪ, ಚೌಡಯ್ಯ, ಶೋಭಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net