ಕಷ್ಟಪಟ್ಟು ದುಡಿದರೆ ಉತ್ತಮ ಭವಿಷ್ಯ

 ಎಚ್.ಡಿ.ಕೋಟೆ ಪಟ್ಟಣದ ನ್ಯಾಯಲಯದ ಆವರಣದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಬಿ.ಕೆ.ಮಹೇಶ್ ಉದ್ಘಾಟಿಸಿದರು. ಸಂತೋಷ್ ಕೊಠಾರಿ, ಗಂಗರಾಜು, ಎಸ್.ಲೋಕೇಶ್, ಸಿದ್ದಪ್ಪಾಜಿ, ಮಹೇಂದ್ರ, ಮಣಿರಾಜು ಇತರರು ಇದ್ದರು.
ಎಚ್.ಡಿ.ಕೋಟೆ ಪಟ್ಟಣದ ನ್ಯಾಯಲಯದ ಆವರಣದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಬಿ.ಕೆ.ಮಹೇಶ್ ಉದ್ಘಾಟಿಸಿದರು. ಸಂತೋಷ್ ಕೊಠಾರಿ, ಗಂಗರಾಜು, ಎಸ್.ಲೋಕೇಶ್, ಸಿದ್ದಪ್ಪಾಜಿ, ಮಹೇಂದ್ರ, ಮಣಿರಾಜು ಇತರರು ಇದ್ದರು.
Published on
ಎಚ್.ಡಿ.ಕೋಟೆ: ವಕೀಲ ವೃತ್ತಿ ಯಾವತ್ತೂ ಯಾರಿಗೂ ಮೋಸ ಮಾಡುವುದಿಲ್ಲ. ನಾವು ಅಂದುಕೊಂಡಿದ್ದನ್ನು ನಾವು ಸಾಧನೆ ಮಾಡುತ್ತೇವೆ ತಡವಾಗಬಹುದು. ಆದರೆ ಪ್ರತಿದಿನ ಅನುಭವವನ್ನು ನೀಡುತ್ತದೆ, ಜೀವನ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಿ.ಟಿ.ಮಹೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಮುಂಭಾಗದಲ್ಲಿ ಶುಕ್ರವಾರ ತಾಲೂಕು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವ ವಕೀಲರಿಗೆ ವೃತ್ತಿ ಮೋಸ ಮಾಡುವುದಿಲ್ಲ. ಐದು ವರ್ಷ ಕಷ್ಟಪಡಿ. ಮುಂದೆ ನೀವು ಉತ್ತಮ ಭವಿಷ್ಯ ಕಾಣಬಹುದು ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ ವಕೀಲರ ಪಾತ್ರ ಮುಖ್ಯವಾದದ್ದು, ಸಮಾಜದಲ್ಲಿ ಒಬ್ಬ ವ್ಯಕ್ತಿ ಎಲ್ಲವನ್ನೂ ಕಳೆದುಕೊಂಡು ನಿಂತಾಗ ಆ ವ್ಯಕ್ತಿಗೆ ಸಹಾಯ ಮಾಡಲು ಅವನ ಪರವಾಗಿ ನಿಲ್ಲವವರು ವಕೀಲರು ಎಂದು ಬಣ್ಣಿಸಿದರು.

24 ಗಂಟೆ ದುಡಿಯುವವರಿಗೆ ಕೆಲಸ ಇರುತ್ತದೆ. ದುಡಿಯದೆ ಇರುವವರಿಗೆ ಕೆಲಸ ಇಲ್ಲ. ಕೆಲಸ ಮಾಡುವವರು ಚೆನ್ನಾಗಿ ಇರುತ್ತಾರೆ. ದುಡಿಯದೆ ಇರುವವರು ಬೇರೆಯವರನ್ನು ನೋಡಿ ಅಸೂಯೆಪಡುತ್ತಾರೆ ಎಂದರು.
ಈ ದಿನ ಎಲ್ಲರೂ ಒತ್ತಡವನ್ನು ಬದಿಗೊತ್ತಿ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರಿಂದ ಹಬ್ಬದ ವಾತಾವರಣದಿಂದ ಕೂಡಿದ್ದು, ನ್ಯಾಯಾಲಯಕ್ಕೆ ಒಂದು ಕಳೆ ಬಂದಿದೆ. ಎಲ್ಲ ವಕೀಲರು ಒಂದೆಡೆ ಸೇರಿರುವುದು ಖುಷಿ ತಂದಿದೆ ಎಂದರು.

ಸಂತೋಷ್ ಕೊಠಾರಿ ಮಾತನಾಡಿ, ಕಕ್ಷಿದಾರನಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡುವ ವಕೀಲರ ವೃತ್ತಿ ಸಮಾಜದಲ್ಲಿ ಗೌರವ ತರುತ್ತದೆ. ಕಲಿತ ವಿದ್ಯೆ ನಮ್ಮ ಜೀವನ ಪೂರ್ತಿ ಜತೆಯಲ್ಲಿದ್ದು ಕಾಪಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಗಂಗರಾಜು ಮಾತನಾಡಿದರು. ಇದೇ ಸಂದರ್ಭದಲ್ಲಿ ವಕೀಲರಿಗೆ ಏರ್ಪಡಿಸಿದ್ದ ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸಿದ್ದಪ್ಪಾಜಿ, ಸರ್ಕಾರಿ ವಕೀಲರಾದ ಮಹೇಂದ್ರ, ವಕೀಲರಾದ ಮಣಿರಾಜು, ಎಸ್.ಕೆ.ಮಹೇಶ್, ಜಿ.ಎನ್.ನಾರಾಯಣಗೌಡ, ಲೋಕೇಶ್‌ಗೌಡ, ಚೌಡಹಳ್ಳಿ ಜವರಯ್ಯ, ಶ್ರೀನಿವಾಸ್, ಮೋಹನ್, ರಮೇಶ್, ಹನುಮೇಶ್, ಮಂಜು, ನಾಗೇಶ್, ಬಾಲಚಂದ್ರ, ಡಿ.ಆರ್.ಮಹೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net