ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ

Women attacked by breaking into houses
Women attacked by breaking into houses
Published on
ಚಿಂತಾಮಣಿ: ತಾಲೂಕಿನ ಸಂತೇಕಲ್ಲಹಳ್ಳಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ 5 ಜನ ಮನೆಗೆ ನುಗ್ಗಿ ಮಹಿಳೆ ಮತ್ತು ಆಕೆಯ ತಾಯಿ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಂತೇಕಲ್ಲಹಳ್ಳಿಯ ಲಾವಣ್ಯ (32), ತಾಯಿ ವೆಂಕಟರತ್ನಮ್ಮ ಗಾಯಗೊಂಡಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆ ತಾಲೂಕಿನ ಫ್ಯಾಕ್ಟರಿಗೇಟ್​ ನಿವಾಸಿ ರಾಣಿ, ಆಕೆಯ ಮಕ್ಕಳಾದ ನೀಲಜಾ (20), ನಿತಿನ್​ ರಾಜ್​ (22), ತಂಗಿ ಶಶಿಕಲಾ (35), ಪ್ರಿಯಾಂಕಾ(20) ಎನ್ನುವವರ ವಿರುದ್ಧ ಜೂ.11ರಂದು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ: ದೂರುದಾರೆ ಲಾವಣ್ಯಗೆ 16 ವರ್ಷಗಳ ಹಿಂದೆ ಹೊಸಕೋಟೆ ತಾಲೂಕಿನ ಫ್ಯಾಕ್ಟರಿಗೇಟ್​ ನಿವಾಸಿ ರವಿಕುಮಾರ್​ನೊಂದಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ರವಿಕುಮಾರ್​ 11 ವರ್ಷಗಳ ಹಿಂದೆ ಲಾವಣ್ಯಳನ್ನು ಬಿಟ್ಟು ರಾಣಿ ಎಂಬಾಕೆಯೊಂದಿಗೆ ವಾಸವಾಗಿದ್ದಾನೆ. ಸದ್ಯ ದಂಪತಿ ನಡುವೆ ಚಿಂತಾಮಣಿ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಸಲ್ಲಿಸಿರುವ ಮೊಕದ್ದಮೆಗಳ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ಕೋಪಕ್ಕೆ ರಾಣಿ ಮತ್ತು ಆಕೆಯ ಕಡೆಯವರು ಜೂ.2ರಂದು ರಾತ್ರಿ 10.30ರ ಸಮಯದಲ್ಲಿ ಲಾವಣ್ಯ ಮನೆಗೆ ನುಗ್ಗಿ ಹಲ್ಲೆ ಮಾಡಿ, ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಗಾಯಾಳುಗಳ ಕಿರುಚಾಟ ಕೇಳಿ ಸ್ಥಳಿಯರು ಧಾವಿಸಿ ಜಗಳ ಬಿಡಿಸಿದ್ದರು. ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ಮೂಲಕ ಬಗೆಹರಿಸುವುದಾಗಿ ಹೇಳಿದ್ದರಿಂದ ದೂರು ನೀಡಲು ವಿಳಂಬವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net