ಆನೇಕಲ್ ತಾಲೂಕಿನ ಸರ್ಜಾಪುರದ ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಪ್ರೇರಣಾ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಎಸ್.ವಿ. ಭರತ್ ಗೌಡ, ಪೂಜ್ಯ ಯತಿಶ್ರೀ ರಾಮಪ್ರಿಯಾಂಬಾ, ದಕ್ಷಿಣ ವಿಭಾಗದ ಸಂಘ ಸರ ಚಾಲಕರಾದ ಹರೀಶ್, ಜಯಣ್ಣ, ಗಾಯತ್ರಿ ಪ್ರಸಾದ್, ಯಶೋಧಾ, ಸುಷ್ಮಾ ಭಟ್, ನೀರಜಾ, ಪ್ರತಿಮಾ, ಹೇಮಲತಾ, ಸುಧಾ ಇತರರು ಇದ್ದರು.
Published on:
Copied
Follow Us
ಸರ್ಜಾಪುರ : ಮಹಿಳೆಯರು ಕುಟುಂಬದ ಆಧಾರಸ್ತಂಭವಾಗಿದ್ದು, ಸಮಾಜದ ನೈತಿಕ ಮೌಲ್ಯ ಉಳಿಸುವ ಶಕ್ತಿ ಅವರಿಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಆನೇಕಲ್ ತಾಲೂಕಿನ ಸರ್ಜಾಪುರದ ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಮಹಿಳಾ ದಿನದ ಪ್ರಯುಕ್ತ ಸತತ್ ಭರತ್ ಸಂಸ್ಥೆಯಿಂದ ಆಯೋಜಿಸಿದ್ದ ಪರಂಪರೆಯಿಂದ ಪರಿವರ್ತನೆ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಪ್ರೇರಣಾ ಜ್ಯೋತಿ ಪ್ರಶಸ್ತಿ ನೀಡಿ ಮಾತನಾಡಿದರು.ಮಹಿಳೆಯರು ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ. ಮಹಿಳೆಯರಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡಿದರೆ ಯಾವುದೇ ಸವಾಲನ್ನೂ ಜಯಿಸಬಲ್ಲರು ಎಂದರು.
ಮಹಿಳಾ ಸಬಲೀಕರಣವೆಂದರೆ ಕೇವಲ ಹಕ್ಕುಗಳನ್ನು ನೀಡುವುದಲ್ಲ, ಅವರಿಗೆ ಆತ್ಮವಿಶ್ವಾಸ, ಸುರಕ್ಷತೆ ಮತ್ತು ಸ್ವಾಭಿಮಾನ ನೀಡುವುದು. ಕುಟುಂಬದಲ್ಲಿ ಮಕ್ಕಳಿಗೆ ಸಂಸ್ಕಾರ ಬೋಧಿಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಿದೆ. ಉತ್ತಮ ಸಮಾಜ ನಿಮಾರ್ಣದ ಮೂಲವೇ ಸಶಕ್ತ ಮಹಿಳೆ ಹಾಗೆಯೇ, ಯುವ ಪೀಳಿಗೆ ಸಂಸತಿ, ಪರಂಪರೆ ಮತ್ತು ಮೌಲ್ಯ ಮರೆಯದೇ ಮುಂದುವರಿಸಬೇಕು. ಮಹಿಳೆಯರ ಸಾಧನೆ ಗೌರವಿಸುವುದು ಮಾತ್ರವಲ್ಲ, ಅವರನ್ನು ಪ್ರತಿದಿನ ಪ್ರೋತ್ಸಾಹಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು ಎಂದು ಹೇಳಿದರು. ಸತತ್ ಭಾರತ್ ಸಂಸ್ಥೆಯ ಸಂಸ್ಥಾಪಕ ಎಸ್.ವಿ. ಭರತ್ ಗೌಡ ಮಾತನಾಡಿ, ಪರಂಪರೆಯಿಂದ ಪರಿವರ್ತನೆ ಎಂಬ ಪರಿಕಲ್ಪನೆ ಕೇವಲ ಘೋಷಣೆಯಲ್ಲ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ತೋರುವ ಚಿಂತನೆ. ಮಹಿಳೆಯರು ನಮ್ಮ ಸಂಸತಿ, ಮೌಲ್ಯ ಮತ್ತು ಪರಂಪರೆಯ ಜೀವಂತ ಪ್ರತಿಕವಾಗಿದ್ದು, ಅವರ ಸಬಲೀಕರಣವೇ ಸಮಾಜದ ಅಭಿವೃದ್ಧಿಗೆ ಆಧಾರಸ್ತಂಭ ಎಂದರು.
ಪ್ರೇರಣಾ ಜ್ಯೋತಿ ಪ್ರಶಸ್ತಿ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವುದು ಇತರರಿಗೆ ಪ್ರೇರಣೆಯಾಗಲಿದೆ. ಇಂತಹ ಸಾಧಕಿಯರ ಕಥೆಗಳು ಸಮಾಜಕ್ಕೆ ದಾರಿದೀಪವಾಗಬೇಕು ಎಂದರು.
ಸನ್ಮಾನ: ಶಿಕ್ಷಣ, ಕ್ರೀಡೆ, ಸಾಮಾಜಿಕ ಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 15 ಸಾಧಕಿಕರಿಗೆ ಪ್ರೇರಣಾ ಜ್ಯೋತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.