ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ಮಂಗಳವಾರ ರಾತ್ರಿ ಕಾಡಾನೆಯೊಂದು ಜಮೀನೊಂದಕ್ಕೆ ಲಗ್ಗೆ ಇಟ್ಟು ಮುಸುಕಿನ ಜೋಳ, ಅರಿಸಿಣ ಹಾಗೂ ನೀರಾವರಿ ಪರಿಕರವನ್ನು ನಾಶಪಡಿಸಿದೆ.
ಮಲೆಮಹದೇಶ್ವರ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತಿರುವ ಗ್ರಾಮದ ಅರಣ್ಯ ಪ್ರದೇಶದ ಅಂಚಿನಲ್ಲಿ ಚಂದನ ಎಂಬುವರು 3 ಎಕರೆ ಜಮೀನನ್ನು ಹೊಂದಿದ್ದು, ಮುಸುಕಿನ ಜೋಳ ಹಾಗೂ ಅರಿಸಿಣ ಬೆಳೆದಿದ್ದರು. ಆದರೆ ಸಮೀಪದ ಅರಣ್ಯ ಪ್ರದೇಶದಿಂದ ತಡರಾತ್ರಿ ಜಮೀನಿಗೆ ಲಗ್ಗೆ ಇಟ್ಟಿರುವ ಕಾಡಾನೆ ಫಸಲನ್ನು ತಿಂದು, ತುಳಿದು ನಾಶಪಡಿಸಿದೆ. ಜತೆಗೆ ನೀರಾವರಿ ಪರಿಕರವನ್ನು ಹಾನಿಗೊಳಿಸಿದೆ. ಇದರಿಂದ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವುದರ ಮೂಲಕ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಚಂದನ ಒತ್ತಾಯಿಸಿದ್ದಾರೆ.
ಕಡಿವಾಣಕ್ಕೆ ಒತ್ತಾಯ: ಡಿ.14 ರಂದು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಲಗ್ಗೆಯಿಟ್ಟ ಕಾಡಾನೆ ದಾಂಧಲೆ ನಡೆಸಿ ಕಾಂಪೌಂಡ್ ಹಾಗೂ ಕುಡಿಯುವ ನೀರಿನ ಪರಿಕರವನ್ನು ಹಾನಿಗೊಳಿಸಿತ್ತು. ಇದೀಗ ಜಮೀನಲ್ಲಿ ಫಸಲನ್ನು ನಾಶಪಡಿಸಿದೆ. ಇದರಿಂದ ಗ್ರಾಮದಲ್ಲಿ ಕಾಡಾನೆಯ ಹಾವಳಿಯದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕಾಡಾನೆಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.