ಗುಂಡ್ಲುಪೇಟೆ ಪಟ್ಟಣಕ್ಕೆ ನುಗ್ಗಿದ ಕಾಡಾನೆ

ಗುಂಡ್ಲುಪೇಟೆ ಪಟ್ಟಣದ ಮಾರಿಗುಡಿ ರಸ್ತೆಯಲ್ಲಿ ಕಾಡಾನೆ ಸಂಚಾರದ ದೃಶ್ಯ ಸಿಸಿ ಕ್ಯಾಮರಾದಲ್ಲಿ
ಗುಂಡ್ಲುಪೇಟೆ ಪಟ್ಟಣದ ಮಾರಿಗುಡಿ ರಸ್ತೆಯಲ್ಲಿ ಕಾಡಾನೆ ಸಂಚಾರದ ದೃಶ್ಯ ಸಿಸಿ ಕ್ಯಾಮರಾದಲ್ಲಿ
Published on
ಗುಂಡ್ಲುಪೇಟೆ: ಬುಧವಾರ ತಡರಾತ್ರಿ ಪಟ್ಟಣಕ್ಕೆ ಬಂದ ಆನೆಯೊಂದು ನಾನಾ ಬಡಾವಣೆಗಳಲ್ಲಿ ಸುತ್ತಾಡಿದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಕಾಡಿಗಟ್ಟಿದ್ದಾರೆ.

ಗುರುವಾರ ನಸುಕಿನ 3 ಗಂಟೆಯ ವೇಳೆಗೆ ಎಲ್ಲಿಂದಲೋ ಪಟ್ಟಣಕ್ಕೆ ಬಂದ ಕಾಡಾನೆಯೊಂದು ವಿಜಯನಾರಾಯಣಸ್ವಾಮಿ ದೇವಾಲಯ ಮಾರ್ಗವಾಗಿ ಮಾರಿಗುಡಿ ರಸ್ತೆಯಲ್ಲಿ ಸಾಗಿದೆ. ಪುರಸಭೆಯ ಮಾಜಿ ಅಧ್ಯಕ್ಷ ಕಿರಣ್ ಗೌಡ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಜಖಂಗೊಳಿಸಿ ಬಳಿ ಕೆ.ಎಸ್.ನಾಗರತ್ನಮ್ಮ ಪ್ರೌಢಶಾಲೆಯ ಹಿಂಭಾಗ ಜಮೀನಿನಲ್ಲಿ ಬೀಡುಬಿಟ್ಟಿದೆ. ಈ ಬಗ್ಗೆ ಮಾಹಿತಿ ತಿಳಿದ ಬಫರ್ ವಲಯದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜೀಪ್‌ನಲ್ಲಿ ಕುಳಿತು ಅದನ್ನು ಪಟಾಕಿ ಸಿಡಿಸಿ ಕಾಡಿಗಟ್ಟಲು ಕಾರ್ಯಾಚರಣೆ ಕೈಗೊಂಡರು.

ಆನೆಯು ಹಳ್ಳಿಗಳ ಮೇಲೆ ಸಾಗುತ್ತಾ ಬೆಳಗಿನ ವೇಳೆಯಲ್ಲಿ ಕುಂದಕೆರೆ ಸಮೀಪದ ಹೆಗ್ಗವಾಡಿ ಗ್ರಾಮದ ಗುಡ್ಡದ ಮೂಲಕ ಕುಂದಕೆರೆ ಅರಣ್ಯಕ್ಕೆ ಹೋಗಿದೆ ಎಂದು ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ಖಚಿತಪಡಿಸಿದ್ದಾರೆ.

ಎರಡು ತಿಂಗಳ ಹಿಂದೆ ಕಲ್ಲಹಳ್ಳಿ ಸಮೀಪ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಬಂಡೀಪುರದ ಸಾಕಾನೆಯೊಂದು ಕೆರೆಯಲ್ಲಿ ನೀರು ಕುಡಿಯುವಾಗ ಜೇನುಕಚ್ಚಿದ ಪರಿಣಾಮ ಮಾವುತನ ನಿಯಂತ್ರಣ ತಪ್ಪಿ ಪಟ್ಟಣದ ಮಾರ್ಗವಾಗಿ ಓಡಾಡಿ ಜನರಲ್ಲಿ ಭೀತಿಯುಂಟು ಮಾಡಿದ್ದನ್ನು ಸ್ಮರಿಸಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net