ಹನೂರು: ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಆಂಡಿಪಾಳ್ಯ ಜಮೀನುಗಳಿಗೆ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಬೆಳ್ಳುಳ್ಳಿ ಫಸಲು ಹಾಗೂ ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿವೆ.
ಗ್ರಾಮದ ತಮಿಳ್ ಸೆಲ್ವಂ, ಮನೋಹರ್ ಹಾಗೂ ಬಸವಣ್ಣ ಅವರು ಬೆಳ್ಳುಳ್ಳಿ ಬೆಳೆದಿದ್ದರು. ಆದರೆ ರಾತ್ರಿ ಸಮೀಪದ ಸಫಾರಿ ಅರಣ್ಯ ಪ್ರದೇಶದಿಂದ ಜಮೀನುಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ದಾಂಧಲೆ ನಡೆಸಿ ಫಸಲು ಹಾಗೂ ಸೋಲಾರ್ ತಂತಿ ಬೇಲಿಯನ್ನು ತುಳಿದು ನಾಶಪಡಿಸಿದ್ದು, ನಷ್ಟವನ್ನು ಉಂಟು ಮಾಡಿದೆ.
ಎರಡು ವರ್ಷದಿಂದ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಇರಲಿಲ್ಲ. ಆದರೆ ಸಫಾರಿ ಆರಂಭಿಸಿರುವುದರಿಂದ ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಕ್ರಮ ವಹಿಸಿರಲಿಲ್ಲ. ಇದರಿಂದ ಬೇಸತ್ತು ಇತ್ತೀಚೆಗೆ ಸಫಾರಿ ವಾಹನವನ್ನು ತಡೆದು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಆರ್‌ಎಫ್‌ಒ ಪುಟ್ಟರಾಜು ಅವರು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಕಾಡಾನೆಗಳ ಹಿಂಡು ಜಮೀನುಗಳಿಗೆ ಲಗ್ಗೆ ಇಟ್ಟು ಫಸಲು ನಾಶಪಡಿಸಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು. ನಷ್ಟಕ್ಕೆ ಇಲಾಖೆಯಿಂದ ಪರಿಹಾರ ದೊರಕಿಸಿ ಕೊಡುವಂತೆ ರೈತ ತಮಿಳ್ ಸೆಲ್ವಂ ಒತ್ತಾಯಿಸಿದ್ದಾರೆ.