ಪತ್ನಿಯಿಂದಲೇ ಅರಿವಳಿಕೆ ವೈದ್ಯ ಕಿರಣ್ ಬರ್ಬರ ಹತ್ಯೆ! ಪುತ್ರನ ಮೇಲೂ ಚಾಕುವಿನಿಂದ ಹಲ್ಲೆ; ಆರೋಪಿ ಅರೆಸ್ಟ್​

ಕೊಲೆಯಾದ ವೈದ್ಯ ಕಿರಣ್​ ದಂಪತಿ
ಕೊಲೆಯಾದ ವೈದ್ಯ ಕಿರಣ್​ ದಂಪತಿ
Published on

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಡಾ. ಕಿರಣ್
  • ಗಂಡನನ್ನು ಇರಿದು ಕೊಂದ ಆರೋಪಿ ಪತ್ನಿ ಪ್ರಿಯಾಂಕಾ
  • ಧಾರವಾಡದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್​ಮೆಂಟ್​ನಲ್ಲಿ ಘಟನೆ
ಧಾರವಾಡ: ಪತ್ನಿಯೇ ತನ್ನ ವೈದ್ಯ ಪತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ನಗರದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್​ಮೆಂಟ್​ನಲ್ಲಿ ಬುಧವಾರ ಸಂಜೆ ಸಂಭವಿಸಿದೆ. 
ಪತಿಯನ್ನು ಇರಿದು ಕೊಂದಿರುವ ಮಹಿಳೆ, ತನ್ನ 8 ವರ್ಷದ ಮಗನ ಮೇಲೂ ಚಾಕುವಿನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾಳೆ. ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ. 
ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಡಾ. ಕಿರಣ್​, ತಮ್ಮ ಪತ್ನಿ ಪ್ರಿಯಾಂಕಾಳಿಂದಲೇ ಕೊಲೆಯಾದ ದುರ್ದೈವಿ. ಅಪಾರ್ಟ್​ಮೆಂಟ್​ನಲ್ಲಿ ಪತಿ, ಪತ್ನಿ, ಮಗ ಮೂವರು ಒಟ್ಟಿಗೆ ವಾಸಿಸುತ್ತಿದ್ದರು. ಕೌಟುಂಬಿಕ ಕಾರಣದಿಂದ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ್​ ಹಾಗೂ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆಯಲ್ಲಿ ಡಾ. ಕಿರಣ್​ ಸಾವಿಗೀಡಾಗಿದ್ದರೆ, ಅವರ 8 ವರ್ಷ ಪುತ್ರ ಬದುಕಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಚಿಕಿತ್ಸೆಗಾಗಿ ಬಾಲಕನನ್ನು ಆಸ್ಪತ್ರೆಗೆ ರವಾನಿಸಿದರು. ಈ ವೇಳೆ ಘಟನಾ ಸ್ಥಳದಲ್ಲೇ ಇದ್ದ ಪ್ರಿಯಾಂಕಾಳನ್ನು ವಶಕ್ಕೆ ಪಡೆಯಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net